ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್)ದಿಂದ ದುಷ್ಪರಿಣಾಮ ಎದುರಿಸುತ್ತಿರುವ ಜನರನ್ನು ಈ ಕೂಡಲೇ ಸ್ಥಳಾಂತರಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು. ಆರ್‌ಟಿಪಿಎಸ್‌ನಿಂದ ಹೊರ ಬರುವ ಹಾರೋಬೂದಿ, ಇಲ್ಲಿನ 1ನೇ ಕ್ರಾಸ್ ಬಳಿ ಬರುವ ಎಸ್‌ಬಿಟಿ, ಬಸವಗುಡಿ ಕಾಲೋನಿವರೆಗೆ ಹರಡುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ ಕೂಡಲೇ ಅಲ್ಲಿಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ನೂರಾರು ಪ್ರತಿಭಟನಾಕಾರರು ಒತ್ತಾಯಿಸಿದರು.