ರಾಯಚೂರು : ನಗರಸಭೆಯಿಂದ ನಗರದ 35 ವಾರ್ಡ್‌ಗಳಲ್ಲಿ ಸರಿಸುಮಾರು ಸಾವಿರಾರು ಬೀದಿದೀಪಗಳನ್ನು ಆಳವಡಿಸಲಾಗಿದೆ. ಇದಕ್ಕಾಗಿ ವಿದ್ಯುತ್ ಕಂಬಗಳನ್ನು ಜೆಸ್ಕಾಂ ಅಧಿಕಾರಿಗಳು ಅಳವಡಿಸಿದ್ದಾರೆ.
ರಾಯಚೂರು ನಗರದಲ್ಲಿ ಒಟ್ಟು 35 ವಾರ್ಡ್‌ಗಳಿವೆ. ನಗರಸಭೆ ಎಲೆಕ್ಟ್ರಾನಿಕ್ ಜೆಇ ಹೇಳುವ ಪ್ರಕಾರ ಹತ್ತು ಸಾವಿರ ಬೀದಿ ದೀಪಗಳನ್ನು ಆಳವಡಿಸಲಾಗಿದೆ. ಬೀದಿ ದೀಪಗಳ ನಿರ್ವಹಣೆ ಜವಾಬ್ದಾರಿಯನ್ನು ನಗರಸಭೆಗೆ ವಹಿಸಲಾಗಿದೆ. ಈ ದೀಪಗಳ ನಿರ್ವಹಣೆಯನ್ನು ಟೆಂಡರ್ ಮೂಲಕ ಬೆಂಗಳೂರು ಮೂಲದ ಕಂಪನಿಗೆ ನೀಡಲಾಗಿದೆ. ಇದರ ನಿರ್ವಹಣೆ, ವಿದ್ಯುತ್ ದೀಪಗಳ ಅಳವಡಿಕೆ, ನಿರ್ವಹಿಸುವ ಸಿಬ್ಬಂದಿ ಸೇರಿ ಎಲ್ಲವನ್ನೂ ಖಾಸಗಿ ಕಂಪನಿಗೆ ವಹಿಸಲಾಗಿದೆ.
ಇದಕ್ಕೆ ನಗರಸಭೆಯಿಂದ ಪ್ರತಿ ತಿಂಗಳು 8.30 ಲಕ್ಷ ರೂ. ಪಾವತಿ ಮಾಡಲಾಗುತ್ತದೆ. ನಗರದ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ ಅಳವಡಿಕೆಗೆ ಬೇಡಿಕೆ, ರಿಪೇರಿಯ ದೂರು ಹಾಗೂ ಬದಲಾವಣೆ ಸಂಬಂಧ ನಗರಸಭೆಗೆ ದೂರು ಬಂದ್ರೆ, ಆ ದೂರಿನ ಆಧಾರದ ಮೇಲೆ ಬೀದಿ ದೀಪಗಳನ್ನು ನಿರ್ವಹಿಸಲಾಗುತ್ತದೆ ಎಂದು ನಗರಸಭೆಯ ಎಲೆಕ್ಟ್ರಾನಿಕ್ ವಿಭಾಗದ ಜೆಇ ಹೇಳಿದ್ದಾರೆ.
ಇನ್ನೊಂದೆಡೆ, ಬೀದಿ ದೀಪದ ದುರಸ್ಥಿ ಹಾಗೂ ಅಳವಡಿಕೆ ಸಂಬಂಧ ದೂರು ಸಲ್ಲಿಸಿದ್ರೂ ನಗರಸಭೆಯಿಂದ ಸರಿಯಾಗಿ ಸ್ಪಂದನೆಯಿಲ್ಲ ಎಂದು ನಗರದ ಬಡಾವಣೆ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ. ಬೀದಿ ದೀಪಗಳನ್ನು ಸರಿಯಾದ ಸಮಯಕ್ಕೆ ಉರಿಸಿ, ಬೆಳಕಿರುವಾಗ ಆರಿಸಬೇಕು. ಕೆಲವು ಕಡೆ ವಿದ್ಯುತ್ ದೀಪಗಳನ್ನು ಆರಿಸಿದ್ರೆ, ಇನ್ನೂ ಕೆಲವೆಡೆ ಹಾಗೆಯೇ ಅನಾವಶ್ಯಕವಾಗಿ ಉರಿಸಲಾಗುತ್ತಿದೆ.
ಅದರಲ್ಲಿ ಬಡಜನ ವಾಸಿಸುವ ಜಲಾಲನಗರ, ಎಲ್‌ಬಿಎಸ್ ನಗರ, ಮಡ್ಡಿಪೇಟೆ, ಹರಿಜನವಾಡಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ರಸ್ತೆಗಳು ಕೂಡ ಹದಗೆಟ್ಟಿರುವುದರಿಂದ ತೆಗ್ಗು-ದಿನ್ನೆಗಳು ಕಾಣದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಅಂತಾರೆ ನಗರದ ನಿವಾಸಿ ಕೆ ಜಿ ವೀರೇಶ್. ಬೀದಿ ದೀಪಗಳ ನಿರ್ವಹಣೆ ಕುರಿತಂತೆ ಪೌರಾಯುಕ್ತರನ್ನು ಸಂಪರ್ಕಿಸಲು ಕಚೇರಿಗೆ ತೆರಳಿದ್ರೂ ಸಿಗುತ್ತಿಲ್ಲ.
ದೂರವಾಣಿ ಮೂಲಕ ಸಂಪರ್ಕಿಸಿದ್ರೆ, ಕೆಳ ಹಂತದ ಅಧಿಕಾರಿಗಳಿಂದ ಪಡೆದುಕೊಳ್ಳಿ ಎಂದು ಹೇಳುವ ಮೂಲಕ ಜಾರಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ರಾಯಚೂರು ನಗರದಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷಾಂತರ ರೂ. ವ್ಯಯಿಸಲಾಗುತ್ತಿದೆ. ಬೀದಿ ದೀಪಗಳಲ್ಲಿ ಕೆಲವು ಸರಿಯಾಗಿ ನಿರ್ವಹಣೆ ಮಾಡಿದ್ರೆ, ಇನ್ನೂ ಕೆಲವು ಕಡೆ ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವ ಆರೋಪ ನಗರಸಭೆ ಮೇಲಿದೆ.