ರಾಯಚೂರು: ಮನೆಯಲ್ಲಿ ಅಳವಡಿಸಿದ್ದ ಎಸಿ (ಹವಾನಿಯಂತ್ರಿತ ಯಂತ್ರ) ಸ್ಫೋಟಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ರಂಜಿತಾ (33), ಮೃದಲ(13), ತಾರುಣ್ಯ(5) ಎಂದು ಗುರುತಿಸಲಾಗಿದೆ. ತಾಯಿ ಮತ್ತು ಮಕ್ಕಳಿಬ್ಬರು ಮನೆಯಲ್ಲಿ ಇರುವಾಗ ಎಸಿ (ಹವಾನಿಯಂತ್ರಿತ ಯಂತ್ರ) ಸ್ಫೋಟಗೊಂಡು ರೂಮ್ನಲ್ಲಿ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ರಾಯಚೂರು ಡಿವೈಎಸ್ಪಿ, ಶಕ್ತಿನಗರ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ.
ಇನ್ನೂ, ಮೃತರ ಪತಿ ಸಿದ್ಧಲಿಂಗಯ್ಯ ಹಾಗೂ ಪತ್ನಿ ಮಂಡ್ಯ ಜಿಲ್ಲೆಯ ನಿವಾಸಿಗಳಾಗಿದ್ದು, ಘಟನೆ ಮಾಹಿತಿಯನ್ನು ಮೃತ ರಂಜಿತಾ ಕುಟುಂಬಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ರಂಜಿತಾ ಕುಟುಂಬದವರು ಬಂದ ಬಳಿಕ ಅವರು ನೀಡುವ ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಸೆಕ್ಸ್ ರಾಕೆಟ್ ಭೇದಿಸಿದ ಪೊಲೀಸರು: ವಿದೇಶಿ ಹುಡುಗಿಯರ ರಕ್ಷಣೆ, ನಾಲ್ವರ ಬಂಧನ
ಬೆಂಗಳೂರಿನಲ್ಲಿ ಭಾನುವಾರ ಅಂಗಡಿಯೊಂದರಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಉಂಟಾದ ಸ್ಫೋಟದಿಂದ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಹೆಬ್ಬಾಳದ ಗುಡ್ಡದಹಳ್ಳಿಯ ಸಿಲಿಂಡರ್ ಅಂಗಡಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಅಂಗಡಿ ಎದುರು ಆಡುತ್ತಿದ್ದ 13 ವರ್ಷದ ಮಹೇಶ್ ಎಂಬ ಬಾಲಕ ಬಲಿಯಾಗಿದ್ದ.
ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ವೇಳೆ ದುರ್ಘಟನೆ: ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ಅಂಗಡಿಯಲ್ಲಿ ಈ ಘಟನೆ ನಡೆದಿತ್ತು. ಅಂಗಡಿಯಲ್ಲಿದ್ದ ಲಿಯಾಕತ್ ಎಂಬಾತ ಸಿಲಿಂಡರ್ ರಿಫಿಲ್ಲಿಂಗ್ ಮಾಡುವಾಗ ಆತನ ಅರಿವಿಗೆ ಬಾರದಂತೆ ಅನಿಲ ಸೋರಿಕೆ ಆಗಿತ್ತು. ಅಷ್ಟೇ ಅಲ್ಲ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸಿಲಿಂಡರ್ ಸ್ಫೋಟಗೊಂಡಿತ್ತು. ಆ ಸಂದರ್ಭದಲ್ಲಿ ಅಂಗಡಿ ಬಳಿ ಆಟವಾಡುತ್ತಿದ್ದ ಮಹೇಶ್ ದೇಹ ಸ್ಫೋಟದ ರಭಸಕ್ಕೆ ಛಿದ್ರಗೊಂಡಿತ್ತು.
ಮಗನ ಕಳೆದುಕೊಂಡ ಪೋಷಕರ ಆಕ್ರಂದನ: ಕೂಡಲೇ ಸ್ಥಳೀಯರ ನೆರವಿನಿಂದ ಪೋಷಕರು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವಿಗೀಡಾಗಿದ್ದಾನೆ. ಮಗನ ಮೃತದೇಹದ ಮುಂದೆ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಘಟನೆ ಬಳಿಕ ರಿಯಾಕತ್ ಎಸ್ಕೇಪ್ ಆಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಯಾದಗಿರಿಯ ರಾಮಸಮುದ್ರ ಮೂಲದ ಮಲ್ಲಪ್ಪ ಸರಸ್ಪತಿ ದಂಪತಿಯ ಎರಡನೇ ಮಗ ಮಹೇಶ್, ಚೋಳನಾಯನಕ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದನು. ಮೃತನ ತಂದೆ-ತಾಯಿ ಹಲವು ವರ್ಷಗಳಿಂದ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರ ಮಗನೇ ಈಗ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಅಕ್ರಮವಾಗಿ ಮರಳು ತೆಗೆಯಲು ಹೋಗಿದ್ದ ಮೂವರು ಬಾಲಕರು ನೀರು ಪಾಲು..!