ರಾಯಚೂರು: ಸರ್ಕಾರಿ ಶಾಲೆಗಳೆಂದರೆ ಯಾವುದೇ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂದು ಪಾಲಕರು ಮೂಗು ಮುರಿಯುತ್ತಾರೆ. ಆದರೆ, ಇದಕ್ಕೆ ಅಪವಾದ ಎಂಬಂತೆ ರಾಯಚೂರು ತಾಲೂಕಿನ ಗಡಿ ಭಾಗದ ಮಿಡಗಲದಿನ್ನಿ ಕ್ಯಾಂಪ್ನಲ್ಲೊಂದು ಶಾಲೆ ಗುಣಮಟ್ಟದ ಕಲಿಕೆಯ ಜೊತೆಗೆ ಸ್ವಚ್ಛ ಹಾಗೂ ಹಸಿರು ಪರಿಸರ ನಿರ್ಮಿಸಿ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುತ್ತಿದೆ.
ರಾಯಚೂರು ತಾಲೂಕಿನ ಮಿಡಗಲದಿನ್ನಿ ಕ್ಯಾಂಪ್ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಲಿಟ್ಟರೆ ಸಾಕು ಹಸಿರಿನ ವಾತಾವರಣ ಕಂಡುಬರುತ್ತದೆ. ಈ ಶಾಲೆಯಲ್ಲಿ ಪೇರಲ, ತೆಂಗು, ವಿವಿಧ ಬಗೆಯ ಬಣ್ಣ ಬಣ್ಣದ ಹೂ ಬಿಡುವ ಗಿಡಗಳು ಆಕರ್ಷಣೆಯಾಗಿದ್ದು, ನೈಸರ್ಗಿಕ ಸೊಬಗು ಅನಾವರಣಗೊಂಡಿದೆ.
2006-07 ನೇ ಸಾಲಿನಲ್ಲಿ ಆರಂಭವಾದ ಈ ಶಾಲೆಯಲ್ಲಿ 1ರಿಂದ ಐದನೇ ತರಗತಿವರೆಗೆ ಇದ್ದು, ಒಟ್ಟು 80 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ 36 ಗಂಡು ಹಾಗೂ 44 ಹೆಣ್ಣು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮೊದಲಿಗೆ ಈ ಶಾಲೆಗೆ ಕಾಂಪೌಂಡ್ ಸಹ ಇಲ್ಲದೆ ಸಾಮಾನ್ಯ ಶಾಲೆಯಂತಿತ್ತು. ಈ ಶಾಲೆಗೆ 2010ರಲ್ಲಿ ಹುಬ್ಬಳ್ಳಿಯಿಂದ ವಿದ್ಯಾ ಸಣ್ಣಕ್ಕಿ ಹಾಗೂ ಲಿಂಗಪ್ಪ, ಪರಿಮಳ ಎಂಬ ಶಿಕ್ಷಕರು ಬಂದಾಗಿನಿಂದ ಆಭಿವೃದ್ಧಿಯತ್ತ ಸಾಗತೊಡಗಿದೆ.
ಈಗ ಈ ಶಾಲೆಯಲ್ಲಿ ಸುಸಜ್ಜಿತ ಆಟದ ಮೈದಾನ, ಕಾಂಪೌಂಡ್, ಪ್ರತ್ಯೇಕ ಶೌಚಾಲಯ ಹಾಗೂ ಹಚ್ಚ ಹಸಿರಿನ ವಾತಾವರಣವಿದೆ. ಆರಂಭದಲ್ಲಿ ತೋಟಗಾರಿಕೆ ಹಾಗೂ ತರಕಾರಿ, ಸೊಪ್ಪು, ಟೊಮ್ಯಾಟೋ ಇತರೆ ಬೆಳೆ ಶಾಲೆಯಲ್ಲಿ ಬೆಳೆದು ಬಿಸಿಯೂಟಕ್ಕೆ ಅದನ್ನು ಉಪಯೋಗಿಸಲಾಗುತ್ತಿದೆ.
2013 ರಲ್ಲಿ ಅರಣ್ಯ ಇಲಾಖೆಯಿಂದ ವಿತರಣೆ ಮಾಡಿದ ಸಸಿಗಳನ್ನು ಶಾಲೆಯಲ್ಲಿ ಹಾಕಿ ಪೋಷಣೆ ಮಾಡುವ ಕಾಯಕದ ಜವಾಬ್ದಾರಿ ಹೊತ್ತ ಶಿಕ್ಷಕರು, ಪರಿಸರ ಮಿತ್ರ ಶಾಲೆಗೆ ಬುನಾದಿ ಹಾಕಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಇಡಪನೂರಿನ ಹಸನ್ ಮೋಯಿನುದ್ದೀನ್ ವರ್ಗವಾಗಿ ಬಂದು ಶಿಕ್ಷಕರ, ಮಕ್ಕಳ ಸಹಾಯದಿಂದ ಗಿಡಗಳ ಪಾಲನೆ ಪೋಷಣೆಗೆ ಸಹಕರಿಸಿದರು. ಇದರ ಪರಿಣಾಮವಾಗಿ 2013-14ನೇ ಸಾಲಿನಲ್ಲಿ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯಲ್ಲಿ ನೀಡುವ ಪರಿಸರ ಮಿತ್ರ ಶಾಲೆ ಪ್ರಶಸ್ತಿ ವಿಭಾಗದಲ್ಲಿ ಕಿತ್ತಾಳೆ ಪ್ರಶಸ್ತಿ ಪಡೆಯಿತು.
2017-18ನೇ ಸಾಲಿನಲ್ಲಿ ಹಳದಿ ಪ್ರಶಸ್ತಿ ಹಾಗೂ ಪ್ರಸಕ್ತ ಸಾಲಿನಲ್ಲಿ ಹಸಿರು ಪ್ರಶಸ್ತಿಗೆ ಭಾಜನವಾಗಿದೆ. ಅಲ್ಲದೇ 2011-12ರಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಸಂಸ್ಥೆ ನೀಡುವ ಉತ್ತಮ ಶಾಲೆ ಪ್ರಶಸ್ತಿ, 2014-15ರಲ್ಲಿ ಶಿಕ್ಷಣ ಇಲಾಖೆ ನೀಡುವ ಉತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿ ಪಡೆದಿದೆ ಈ ಶಾಲೆ.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಶಾಲಾ ಮಕ್ಕಳು, ಈ ಹಿಂದೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮೂರು ಬಾರಿ ಪ್ರಶಸ್ತಿ ಪಡೆದಿದ್ದು ಮತ್ತೊಂದು ವಿಶೇಷ. ಈ ಶಾಲೆಯ ಸರ್ಕಾರ ಆಯ್ದ ಬಹುವರ್ಗ ಬೋಧನೆ, ನಲಿ-ಕಲಿ ಕಾರ್ಯಕ್ರಮದಡಿ ಒಂದರಿಂದ ಮೂರನೇ ತರಗತಿಯ ಒಟ್ಟು 39 ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ ಹಾಗೂ ಯಾವುದೇ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲದೆ ಸೃಜನಶೀಲ ವಿದ್ಯಾರ್ಥಿಗಳನ್ನು ಹೊಂದಿದ್ದು ಗಮನಾರ್ಹ ಸಂಗತಿ.
ಉತ್ತಮ ಶಿಕ್ಷಕರು, ಉತ್ತಮ ಆಡಳಿತ ಮಂಡಳಿ ಇದ್ದರೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ದೊರೆಯಬಹುದು ಹಾಗೂ ಸರ್ಕಾರಿ ಶಾಲೆಯ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸಾಧಿಸಿ ತೋರಿಸುವ ಮೂಲಕ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪರಿಸರ ಮಿತ್ರ ಪ್ರಶಸ್ತಿ ಪಡೆದ ಶಾಲೆ 5ನೇ ತರಗತಿಯ ಮಕ್ಕಳಿಗೆ ಬೆಂಚ್ ಹಾಗೂ ಪೀಠೋಪಕರಣ ಮತ್ತಿತರೆ ಸೌಕರ್ಯದ ಅವಶ್ಯಕತೆಯಿದೆ.
.