ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಏರುಪೇರಾದರೆ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿಯಿಂದ ಮೆಗಾಪ್ಲ್ಯಾನ್ ಸದ್ದಿಲ್ಲದೆ ಶುರುವಾಗಿದ್ದು, ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್ ಶಾಸಕನೋರ್ವನಿಗೆ ಗಾಳ ಹಾಕಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಉಮೇಶ್ ಕಾರಜೋಳ ಮೂಲಕ ಲಿಂಗಸೂಗೂರು ಕಾಂಗ್ರೆಸ್ ಶಾಸಕ ಡಿ.ಎಸ್.ಹುಲಗೇರಿಗೆ ಸಿಎಂ ಬಿಎಸ್ವೈ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದ್ದು, ಬಿಜೆಪಿಗೆ ಬರುವಂತೆ ಹುಲಗೇರಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಶಾಸಕ ಡಿ.ಎಸ್.ಹುಲಗೇರಿಯನ್ನು ಐದಾರು ಬಾರಿ ಭೇಟಿಯಾಗಿ ಉಮೇಶ್ ಕಾರಜೋಳ ಮಾತುಕತೆ ನಡೆಸಿದ್ದು, ಉಪ ಚುನಾವಣೆ ಫಲಿತಾಂಶದಲ್ಲಿ ಏರುಪೇರಾದರೆ ಬಿಜೆಪಿಗೆ ಬರಲು ಶಾಸಕ ಹುಲಗೇರಿ ಒಪ್ಪಿದ್ದಾರಂತೆ. ಶಾಸಕ ಹುಲಗೇರಿಯನ್ನು ಗೌಪ್ಯವಾಗಿ ಭೇಟಿ ಮಾಡಿ ರೆಡಿ ಇರುವಂತೆ ಉಮೇಶ್ ಕಾರಜೋಳ ಸೂಚಿಸಿದ್ದು, ಯಾವಾಗ ಬೇಕಾದರೂ ಬಿಜೆಪಿಗೆ ಸೇರ್ಪಡೆ ಆಗುತ್ತೇನೆ ಎಂದು ಶಾಸಕ ಹುಲಗೇರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.