ರಾಯಚೂರು: ತೆಲಂಗಾಣ ಹಾಗೂ ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಕೃಷ್ಣಾ ಬ್ರಿಡ್ಜ್ ಮೇಲಿನ ರಸ್ತೆ ಹದಗೆಟ್ಟು ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಕೋಟ್ಯಂತರ ಹಣ ವ್ಯಯಿಸಿ ದುರಸ್ತಿಗೊಳಿಸಲಾಗಿತ್ತು. ಆದ್ರೆ ಕಳಪೆ ಕಾಮಗಾರಿಯಿಂದ ಸೇತುವೆ ಮೇಲಿನ ರಸ್ತೆ ಹಾಳಾಗಿ ಓಡಾಡುವುದು ಕಷ್ಟ ಸಾಧ್ಯವಾಗಿದ್ದು, ಸೇತುವೆಯ ರಸ್ತೆ ದುರಸ್ತಿ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಲೂಕಿನ ದೇವಸೂಗುರು ಬಳಿ ಇರುವ ಪುರಾತನ ಕೃಷ್ಣಾ ಸೇತುವೆ ರಾಯಚೂರಿನಿಂದ ಹೈದರಾಬಾದ್ಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ವಾಹನಗಳು ಓಡಾಡುತ್ತವೆ. ಇದು ಪುರಾತನ ಸೇತುವೆಯಾಗಿದ್ದು, ಕೆಲ ವರ್ಷಗಳ ಹಿಂದೆ ಸೇತುವೆ ಶಿಥಿಲಗೊಂಡಿತ್ತು. ಈ ಸಂಬಂಧ ಜಿಲ್ಲಾಡಳಿತ ಕೆಲ ದಿನಗಳ ಕಾಲ ಸೇತುವೆಯ ಮೇಲೆ ಸಂಚಾರವನ್ನು ಸ್ಥಗಿತಗೊಳಿಸಿ ಕೋಟ್ಯಂತರ ರೂಪಾಯಿ ವ್ಯಯಿಸಿ ಕಾಮಗಾರಿಯನ್ನು ಕೈಗೊಂಡಿತ್ತು.
ಆದರೆ ಸೇತುವೆಯ ಮೇಲಿನ ರಸ್ತೆ ಮೇಲೆ ನಡೆಸಿದ ಕಾಮಗಾರಿ ಕಳಪೆಯಿಂದ ಕೂಡಿದ್ದ ಕಾರಣ ಪದೇ ಪದೇ ಸೇತುವೆಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು, ತೆಗ್ಗು ಬಿದ್ದಿದ್ದು, ಕಬ್ಬಿಣದ ತುಂಡುಗಳು ಮೇಲೆ ಬಂದಿವೆ. ಇದರಿಂದ ಸಂಚಾರ ನಡೆಸಲು ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಳಪೆ ಕಾಮಗಾರಿ ಮಾಡಿವ ಗುತ್ತಿಗೆದಾರ ಹಾಗೂ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ರಸ್ತೆಯನ್ನು ಮಾಡಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.
ಓದಿ: ಬೆಳಗಾವಿಯಲ್ಲಿ ವರುಣನ ಆರ್ಭಟ : ಧಾರಾಕಾರ ಮಳೆಗೆ ನದಿಯಂತಾದ ರಾಷ್ಟ್ರೀಯ ಹೆದ್ದಾರಿ!