ರಾಯಚೂರು: ನಗರದಿಂದ ಲಿಂಗಸುಗೂರುವರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಹಾಳಾದ ರಸ್ತೆಗಳು ಮತ್ತಷ್ಟು ಹದಗೆಡುವ ಮೂಲಕ ಎರಡು-ಮೂರು ಅಡಿಯಷ್ಟು ತಗ್ಗು ಗುಂಡಿಗಳು ಬಿದ್ದಿವೆ. ಪರಿಣಾಮ, ಈ ರಸ್ತೆಗಳ ಮೇಲೆ ನಿತ್ಯ ವಾಹನಗಳು ಸರ್ಕಸ್ ಮಾಡಿಕೊಂಡು, ಜೀವ ಭಯದ ನಡುವೆ ಓಡಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಕ್ತಿನಗರ - ಗಿಣಿಗೇರಾ ರಾಜ್ಯ ಹೆದ್ದಾರಿ ರಾಯಚೂರಿನಿಂದ ಪೋತ್ನಾಳವರೆಗೆ ಸಂಪೂರ್ಣ ಹದಗೆಟ್ಟಿದೆ. ರಾಯಚೂರಿನಿಂದ ಕಲ್ಮಲಾವರೆಗಿನ ರಸ್ತೆಯಲ್ಲಿ ದೊಡ್ಡ ತಗ್ಗುಗಳು ನಿರ್ಮಾಣವಾಗಿ ಕಾರು, ಸರಕು ಸಾಗಣೆ ವಾಹನಗಳು ಅಪಘಾತಕ್ಕೆ ಈಡಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರ್ಗಳು ತಗ್ಗುಗಳು ದಾಟಿ ಬರುವಷ್ಟರಲ್ಲಿ ಇಂಜಿನ್ಗೆ ಹಾನಿಯುಂಟಾಗುತ್ತಿರುವುದರಿಂದ ಸವಾರರು ನಿತ್ಯವೂ ತೊಂದರೆ ಎದುರಿಸುತ್ತಿದ್ದಾರೆ.
ಅಲ್ಪವಧಿಯಲ್ಲಿ ಸಂಚರಿಸಬಹುದಾಗಿದ್ದ ರಸ್ತೆಗಳೀಗ ಒಂದರಿಂದ ಒಂದುವರೆ ಗಂಟೆಯವರೆಗೆ ಸಮಯವನ್ನು ತೆಗೆದುಕೊಳ್ಳುತ್ತಿವೆ. ಕಳೆದ ಸುಮಾರು 2 ತಿಂಗಳಿಂದ ಹೆದ್ದಾರಿ ದುಸ್ಥಿತಿಗೆ ತಲುಪಿದ್ದರೂ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ರಸ್ತೆಯಲ್ಲಿನ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ, ಇನ್ನೂ ಕಾರ್ಯ ಆರಂಭಗೊಂಡಿಲ್ಲ. ರಾಯಚೂರಿನಿಂದ ಕಲ್ಮಲಾವರೆಗಿನ ಗುಂಡಿ ಮುಚ್ಚಲು 35 ಲಕ್ಷ ರೂ.ಗಳ ಟೆಂಡರ್ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೂ, ನನೆಗುದಿಗೆ ಬಿದ್ದಿದೆ.
ರಸ್ತೆಗಳ ಗುಂಡಿ ಮುಚ್ಚಲು ಟೆಂಡರ್ ಪ್ರಕ್ರಿಯೆ ನಡೆಸಲು ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ನಿತ್ಯ ನರಳಾಟ ಅನುಭವಿಸುತ್ತಿರುವ ಜನರ ಗೋಳು ಕುರಿತು ನಾನಾ ಸಂಘಟನೆಗಳು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕೂಡಾ, ಕನಿಷ್ಠ ಇದಕ್ಕೆ ಸ್ಪಂದಿಸುವ ಕೆಲಸವನ್ನೂ ಮಾಡದಿರುವುದು ವಿಪರ್ಯಾಸವಾಗಿದೆ.