ರಾಯಚೂರು: ನಗರಸಭೆ ಜೆಡಿಎಸ್ ಸದಸ್ಯನ ಮೇಲೆ ಅಪರಿಚಿತರು ಮಾಸ್ಕ್ ಧರಿಸಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಜಾಕಿರ ಹುಸೇನ್ ಸರ್ಕಲ್ ಬಳಿ ಈ ಘಟನೆ ಸಂಭವಿಸಿದೆ. 8 ನೇ ವಾರ್ಡ್ ಜೆಡಿಎಸ್ ಸದಸ್ಯ ಮಕ್ಬೂಲ್ ಹಲ್ಲೆಗೊಳಗಾದ ನಗರಸಭೆ ಸದಸ್ಯ. ನಾಲ್ಕು ಜನ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ತೀವ್ರ ರಕ್ತ ಸ್ರಾವ ಉಂಟಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಸದ್ಯ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಎಸ್ಪಿ ನಿಕ್ಕಂ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧಿಸಿದ್ದಂತೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾಕ್ಷಿ, ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯಲು ಮುಂದಾಗಿದ್ದು, ಇದಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.