ರಾಯಚೂರು : ತುಂಗಭದ್ರಾ ಎಡದಂಡೆ ನಾಲೆ (ಟಿಎಲ್‌ಬಿಸಿ), ಕೃಷ್ಣಾ ಬಲದಂಡೆ ನಾಲಾ (ಎನ್ಆರ್‌ಬಿಸಿ) ಯೋಜನೆಗಳಿಂದ ನೀರು ಬಳಸಿಕೊಂಡು ಜಿಲ್ಲೆಯ ಸಿಂಧನೂರು, ಮಾನವಿ, ಸಿರವಾರ, ದೇವದುರ್ಗ, ರಾಯಚೂರು ತಾಲೂಕಿನ ಲಕ್ಷಾಂಕರ ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ವರ್ಷ ಭತ್ತ ಬೆಳೆಯಲಾಗುತ್ತದೆ.
ಪ್ರಸಕ್ತ ಉತ್ತಮ ಮಳೆ ಸುರಿದಿರುವುದರಿಂದ ಜೂನ್ ಹಾಗೂ ಜುಲೈ ತಿಂಗಳಲ್ಲಿ ನೇರ ಕೂರಿಗೆ ಬಿತ್ತನೆ ಹಾಗೂ ನಾಡಿ ಪದ್ಧತಿ ವಿಧಾನದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ಆದರೆ, ಕೆಲ ದಿನಗಳಿಂದ ಸತತ ಸುರಿದ ಮಳೆಯ ಪರಿಣಾಮ ದುಂಡಾಣು ಎಲೆ ಅಂಗಮಾರಿ ಅಥವಾ ದುಂಡಾಣು ಮಚ್ಚೆ ರೋಗ ಹೆಚ್ಚಾಗಿ ಭತ್ತಕ್ಕೆ ಕಂಡು ಬಂದಿದೆ.
ಭತ್ತದಲ್ಲಿ ಈ ರೋಗವು ಎಲೆ ತುದಿಯಿಂದ ಆರಂಭವಾಗಿ ಎಲೆಯ ಎರಡು ಬದಿಯ ಹೊರಭಾಗದಿಂದ ಅಲೆ ಆಕಾರವಾಗಿ ಬಿಳಿಯ ಬಣ್ಣದಿಂದ ಒಣಗುತ್ತಾ, ನೀರಿನಿಂದ ತೋಯ್ದಿರುವಂತೆ ಭಾಸವಾಗುತ್ತದೆ. ರೋಗದ ತೀವ್ರತೆ ಹೆಚ್ಚಾಗಿ ಚುಕ್ಕೆಗಳು ದೊಡ್ಡದಾಗಿ ಹಳದಿ ಬಣ್ಣಕ್ಕೆ ಪರಿವರ್ತನೆಯಾಗುತ್ತವೆ. ಅಲ್ಲದೇ ಮಚ್ಚೆಗಳು ಪೂರ್ತಿಯಾಗಿ ಎಲೆಯನ್ನ ಆವರಿಸಿ, ಒಣಗಿದ ಎಲೆ ತುದಿ ಹಾವಿನ ಹೆಡೆಯಂತೆಯಾಗಿ ಎಲೆಗಳು ಮುರಿದು ಬೀಳುತ್ತವೆ.
ಜತೆಗೆ ಗಾಳಿ, ಮಳೆ, ಹನಿಗಳಿಂದ ಚದುರಿ, ಕೀಟದ ಮೂಲಕ ರೋಗದ ಹರಡುವಿಕೆ ಹೆಚ್ಚಳವಾಗಿ ಎಲ್ಲಾ ಕಡೆ ಹರಡುತ್ತವೆ. ಇದರಿಂದ ಬೆಳೆ ಕುಂಠಿತಗೊಂಡು, ಇಳುವರಿ ಸಹ ಇಳಿಮುಖವಾಗುತ್ತಿರುವುದು ರೈತರನ್ನ ಆತಂಕಕ್ಕೆ ಮೂಡಿಸಿದೆ.
ಭತ್ತಕ್ಕೆ ಕಾಣಿಸಿಕೊಂಡಿರುವ ರೋಗ ಬಾಧೆ ಹತೋಟಿಗೆ ತರಬೇಕಾಗಿದೆ. ಹೀಗಾಗಿ ರೈತರು ಭತ್ತದ ಕ್ಷೇತ್ರ ಸ್ವಚ್ಛವಾಗಿರಿಸಿಕೊಂಡು, ಅಗತ್ಯಕ್ಕೆ ಅನುಸಾರ ಸಾರಜನಕ ಸಿಂಪಡನೆ ಮಾಡುವುದು, ರೋಗ ಕಾಣಿಸಿದಾಗ ಕೂಡಲೇ ಬ್ಯಾಕ್ಟಿರೀಯಾನಾಶಕ 0.5 ಗ್ರಾಂ ಮತ್ತು ಕಾಪರ್ ಆಕ್ಸಿಕ್ಲೊರೈಡ್ 0.5 ಗ್ರಾಂ. ಅಥವಾ ಸ್ಪ್ರೆಪ್ಟೊಸೈಕ್ಲಿನ್ 0.5 ಗ್ರಾಮ ಹಾಗೂ ಕಾಪರ್ ಆಕ್ಸಿಕ್ಲೋರೈಡ್ 0.3 ಗ್ರಾಂ. ಗುಣಮಟ್ಟದನ್ನು ಖರೀದಿಸಿ 1 ಲೀಟರ್ ನೀರಿಗೆ ಸಿಂಪಡಣೆ ಮಾಡಿದ್ರೆ ದುಂಡಾಣು ಎಲೆ ಅಂಗಮಾರಿ ರೋಗ ಹತೋಟಿಗೆ ಬರಲಿದೆ ಅಂತಾರೆ ಕೃಷಿ ತಜ್ಞರು.