ರಾಯಚೂರು: ಗುರುವಾರ ಹೊರಬಿದ್ದ ಲೋಕಸಭಾ ಚುನಾವಣೆ ಮತ ಎಣಿಕೆಯಲ್ಲಿ ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ 25 ಬಿಜೆಪಿ ಹಾಗೂ ಜೆಡಿಎಸ್, ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿ ತಲಾ ಒಂದೊಂದು ಸ್ಥಾನದ ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ.
ಇತರ ಎಲ್ಲಾ ಕ್ಷೇತ್ರಗಳಿಗಿಂತ ಮಂಡ್ಯ ಚುನಾವಣಾ ಕಣ ಇಡೀ ದೇಶದ ಗಮನ ಸೆಳೆದಿತ್ತು. ರೆಬಲ್ ಸ್ಟಾರ್ ಪತ್ನಿ ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಾರು 1,25,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸುಮಲತಾ ಗೆಲುವು ಸಾಧಿಸಿದ್ದಕ್ಕೆ ರಾಯಚೂರು ತಾಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದರು. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸುಮಲತಾ ಅಂಬರೀಶ್ , ಯಶ್, ದರ್ಶನ್ ಪರ ಘೋಷಣೆ ಕೂಗಿ ಕೇಕ್ ಕತ್ತರಿಸಿದರು.
ಸುಮಲತಾಗೆ ಯಾವುದೇ ರಾಜಕೀಯ ಅನುಭವ ಇಲ್ಲದಿದ್ದರೂ ಮಂಡ್ಯದಲ್ಲಿ ಪಕ್ಷೇತರರಾಗಿ ನಿಂತು ಗೆಲುವು ಸಾಧಿಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರರಾಗಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಪಡೆದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಬರೆದಿದ್ದಾರೆ.