ರಾಯಚೂರು: ಕಲಬುರಗಿ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದ ಹಿನ್ನೆಲೆ ರಾಯಚೂರು ತಾಲೂಕು ಅತ್ಕೂರು ಗ್ರಾಮ ಪಂಚಾಯತ್ ಚುನಾವಣೆಯ ಅಧಿಸೂಚನೆ ಹಿಂಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 176 ಗ್ರಾಮ ಪಂಚಾಯತ್ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಆಯಾ ಗ್ರಾಪಂಗಳಿಗೆ ಮೀಸಲಾತಿ ಹಾಗೂ ವೇಳಾಪಟ್ಟಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಅತ್ಕೂರು ಗ್ರಾಪಂನ ಕೆಲ ವಾರ್ಡ್ಗಳ ಮೀಸಲಾತಿ ಪ್ರಶ್ನಿಸಿ ಕಲಬುರಗಿ ಹೈಕೋಟ್ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಸೆ. 11ರಂದು ಹೊರಡಿಸಿದ್ದ ಅತ್ಕೂರು ಗ್ರಾಮ ಪಂಚಾಯತ್ ಮೀಸಲಾತಿ ಆದೇಶಕ್ಕೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಹೀಗಾಗಿ ಅತ್ಕೂರು ಗ್ರಾಮ ಪಂಚಾಯತ್ಗೆ ಹೊರಡಿಸಲಾಗಿದ್ದ ಮೀಸಲಾತಿ ಹಾಗೂ ಚುನಾವಣಾ ವೇಳಾಪಟ್ಟಿ ಅಧಿಸೂಚನೆ ಹಿಂಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.