ರಾಯಚೂರು: ನಗರದ ವಾರ್ಡ್ ನಂ.16 ತಿಮ್ಮಾಪುರ ಪೇಟೆ ಬಡಾವಣೆಯ ಸಾರ್ವಜನಿಕ ಮಹಿಳಾ ಶೌಚಾಲಯ ಸಂಪೂರ್ಣವಾಗಿ ಹಾಳಾಗಿ ಹಲವಾರು ವರ್ಷಗಳೆ ಕಳೆದಿವೆ. ಬಡಾವಣೆಯ ನಿವಾಸಿಗಳು ಅನಿವಾರ್ಯವಾಗಿ ಅದರ ಬಳಕೆ ಮಾಡುವಂತಹ ಪರಿಸ್ಥಿತಿಯಿದ್ದು, ಶೌಚಾಲಯಗಳ ಸ್ಥಿತಿ ಹೇಳಿಕೊಳ್ಳುವ ಹಾಗಿಲ್ಲ. ಈ ಕುರಿತು ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿನ ಚಿತ್ರಣ ಬದಲಾಗಿಲ್ಲ.
ಸುಮಾರು ಹತ್ತು ಶೌಚಾಲಯಗಳನ್ನು ಹಲವಾರು ವರ್ಷಗಳ ಹಿಂದೆಯೇ ನಗರಸಭೆ ನಿರ್ಮಾಣ ಮಾಡಿ ಕೈ ತೊಳೆದುಕೊಂಡಿದೆ. ನಿರ್ವಹಣೆ ಎಂಬುದು ಮಾತ್ರ ಮರೀಚಿಕೆಯಾಗಿದೆ. ಶೌಚಾಲಯಕ್ಕೆ ಹೋಗುವ ದಾರಿಯಿಂದ ಹಿಡಿದು ಶೌಚಗೃಹದವರೆಗೆ ಎಲ್ಲವೂ ಅಸ್ವಚ್ಛತೆಯಿಂದ ಕೂಡಿದೆ.
ಶೌಚಾಲಯಗಳಿಗೆ ನೀರಿನ ವ್ಯವಸ್ಥೆ ದೂರದ ಮಾತಾಗಿದ್ದು, ಯಾವುದಕ್ಕೂ ಬಾಗಿಲು ಇಲ್ಲ. ಶೌಚಾಲಯದ ಮುಂದೆ ಹಂದಿ ನಾಯಿಗಳ ಕಾಟವಿದ್ದು, ಬಡಾವಣೆಯ ನಿವಾಸಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇಲ್ಲದಿರುವುದರಿಂದ ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆ ಸ್ಥಳೀಯ ನಿವಾಸಿಗಳದ್ದಾಗಿದೆ. ಅಲ್ಲದೇ ಬಡಾವಣೆಯಲ್ಲಿ ಯುಜಿಡಿ ಕಾಮಗಾರಿ ನಡೆದು ವರ್ಷಗಳೆ ಕಳೆದಿದ್ದರೂ, ಮನೆ ಮನೆ ಸಂಪರ್ಕ ನೀಡದ ಹಿನ್ನೆಲೆ ರಸ್ತೆಯ ಮೇಲೆ ಚರಂಡಿ ನೀರು ಹರಿದಾಡುತ್ತಿದೆ. ಚರಂಡಿ ನೀರಿನಲ್ಲಿ ಸಂಚರಿಸುವುದರಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬಿರುತ್ತಿದೆ.
ಸ್ಥಳೀಯ ನಿವಾಸಿ ನಾಗರತ್ನಮ್ಮ ಮಾತನಾಡಿ, ಬಡಾವಣೆಯಲ್ಲಿರುವ ಸಾರ್ವಜನಿಕ ಮಹಿಳಾ ಶೌಚಾಲಯ ಸಂಪೂರ್ಣವಾಗಿ ಹಾಳಾಗಿದ್ದು, ಬಡಾವಣೆಯ ಹಿರಿಯ ನಾಗರಿಕರು ಸೇರಿದಂತೆ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಇಗಲಾದರೂ ದುರಸ್ತಿ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ನಿವಾಸಿ ವೀರೇಶ ಮಾತನಾಡಿ, ವಾರ್ಡ್ ನಂ.16 ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿರುವ ಮಹಿಳಾ ಸಾರ್ವಜನಿಕ ಶೌಚಾಲಯದ ಸ್ಥಿತಿ ಹೇಳತೀರದಾಗಿದೆ. ಅರೆ ಬರೆ ಯುಜಿಡಿ ಕಾಮಗಾರಿಯಿಂದ ಬಡಾವಣೆಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನಗರಸಭೆಯಲ್ಲಿ ಚುನಾಯಿತ ಸದಸ್ಯರ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಜನರು ಯಾರ ಬಳಿ ಕಷ್ಟ ಹೇಳಿಕೊಳ್ಳಲು ಆಗುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದರು.