ರಾಯಚೂರು : ಕೃಷ್ಣ ಹಾಗೂ ಭೀಮಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಈ ವೇಳೆ ರೈತರು ವಿಷ ಸೇವನೆಗೆ ಮುಂದಾದ ಘಟನೆ ನಡೆಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ರೈತ ಸಂಘದ ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ರಾಯಚೂರು ತಾಲೂಕಿನ ಗ್ರಾಮಗಳಾದ ಡಿ.ರಾಮಪುರ, ಆತ್ಕೂರ್, ಕೊರುವೆಹಾಳ, ಕೊರ್ತಕುಂದ ಸೇರಿದಂತೆ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದಿಂದ ಸಾವಿರಾರು ಎಕರೆ ಭತ್ತ, ಹತ್ತಿ, ತೊಗರಿ ಸೇರಿದಂತೆ ಪ್ರಮುಖ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಇದರಿಂದ ರೈತರು ಬೀದಿಗೆ ಬರುವಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು. ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು, ಫಸಲ್ ಭೀಮಾ ಯೋಜನೆಯ ಬಾಕಿ ಹಣ ಪಾವತಿಸಬೇಕು, ಕಳೆದ ವರ್ಷದ ಪ್ರವಾಹ ಪರಿಹಾರ ನೀಡಬೇಕು ಮತ್ತು ಹಾನಿಗೊಳಗಾದ ರಸ್ತೆ, ಮನೆಗಳ ದುರಸ್ತಿಗೆ ಮುಂದಾಗಬೇಕೆಂದು ಎಂದು ಆಗ್ರಹಿಸಿದರು.
ಈ ವೇಳೆ ರೈತರು ವಿಷ ಸೇವನೆಗೆ ಮುಂದಾದಾಗ, ಸ್ಥಳದಲ್ಲಿದ್ದ ಪೊಲೀಸರು ತಡೆದರು. ಈ ವೇಳೆ ಕೆಲ ಹೊತ್ತು ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.