ರಾಯಚೂರು: ಸುರಾನ ಕಾರ್ಖಾನೆಯ 155 ಕಾರ್ಮಿಕರ 40 ತಿಂಗಳ ಬಾಕಿ ವೇತನ ಪಾವತಿಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸುರಾನ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟಿಸಿದ ಪದಾಧಿಕಾರಿಗಳು, ಈ ಕುರಿತು 2018ರಲ್ಲಿ ಕಲಬುರಗಿ ಕಾರ್ಮಿಕ ಉಪ ಆಯುಕ್ತರಲ್ಲಿ ದೂರು ದಾಖಲಿಸಲಾಗಿತ್ತು. ಈ ದೂರು ವಿಚಾರಣೆ ನಡೆಸಿದ್ದು, ಮೂವತ್ತು ದಿನಗಳಲ್ಲಿ ಬಾಕಿ 41 ತಿಂಗಳ ವೇತನ ಪಾವತಿಸಲು ಸುರಾನ ಕಾರ್ಮಿಕ ಆಡಳಿತ ಮಂಡಳಿಗೆ ಆದೇಶಿಸಿದ್ದರು.
ಆದರೆ ಇದಕ್ಕೆ ಸ್ಪಂದಿಸದೇ ಕಾರ್ಖಾನೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಕುರಿತು 2019ರಲ್ಲಿ ಮರುದಾವೆ ಸಲ್ಲಿಸಲಾಗಿದೆ. ಕಾರ್ಮಿಕ ಕಾಯ್ದೆಯ ಸೆಕ್ಷನ್ 190ರ ಅಡಿ ಭೂ ಕಂದಾಯ ತೆರಿಗೆ ಎಂದು ಪರಿಗಣಿಸಿ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಉಪಯೋಗಿಸುವ ಮೂಲಕ ಕಾರ್ಮಿಕರಿಗೆ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಹಾಗಾಗಿ, ಜಿಲ್ಲಾಧಿಕಾರಿಗಳು ಸುರಾನದ 155 ಕಾರ್ಮಿಕರಿಗೆ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.