ರಾಯಚೂರು: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರೊಂದಿಗೆ ಸಮಸ್ಯೆ ಆಲಿಸಲು ಹೋದ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಗ್ರಾಮಸ್ಥರು ತಡೆದು ದಲಿತನೆಂದು ಅವಮಾನಿಸಿದ ಘಟನೆ ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು. ಬಹುದಿನಗಳ ಬೇಡಿಕೆಗಳಾದ ಗುಡಿಸಲು ಮುಕ್ತ ರಾಜ್ಯದ ಆಶಯ ಈಡೇರಿಸಲು ಖುದ್ದು ಜನರೊಂದಿಗೆ ಚರ್ಚಿಸಲು ತೆರಳಿದ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಕೆಲ ಕಿಡಿಗೇಡಿಗಳು ರಾಜಕೀಯ ಪ್ರೇರಿತರಾಗಿ ಸಂಸದರನ್ನು ತಡೆದು ಗ್ರಾಮ ಪ್ರವೇಶಿಸದಂತೆ ಅಡ್ಡಿಪಡಿಸಿ ನಿರ್ಬಂಧ ವಿಧಿಸಿದ್ದು ಖಂಡನೀಯ ಎಂದರು.
ಪ್ರಜೆಗಳಿಂದ ಆಯ್ಕೆಯಾಗಿ ಅವರ ಸಮಸ್ಯೆ ಆಲಿಸುವುದು ಸಂಸದರ ಕರ್ತವ್ಯ. ಆದರೆ, ದಲಿತ ಎಂಬ ಕಾರಣಕ್ಕೆ ಅವರ ಜವಾಬ್ದಾರಿ ನಿರ್ವಹಿಸಲು ಅಡ್ಡಿಪಡಿಸಿದ್ದು ಸರಿಯಲ್ಲ, ಇದು ಮೇಲ್ಜಾತಿಗಳ ಜನರ ಕೊಳಕು ಮನಸ್ಸು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಘಟನೆಯನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ ಇಂತಹ ಘಟನೆ ನಡೆಯದಂತೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.