ರಾಯಚೂರು : ಕರೆಗುಡ್ಡ ಗ್ರಾಮಕ್ಕೆ ತೆರಳುವಾಗ ವೈಟಿಪಿಎಸ್ ಮತ್ತು ತುಂಗಭದ್ರಾ ಹಂಗಾಮಿ ಗುತ್ತಿಗೆ ಕಾರ್ಮಿಕರು ಸಿಎಂ ಕುಮಾರಸ್ವಾಮಿ ಬಸ್ಗೆ ಮುತ್ತಿಗೆ ಹಾಕಿದರು. ಈ ವೇಳೆ, ಸಿಎಂ ಪ್ರತಿಭಟನಾ ನಿರತರ ಮೇಲೆ ಗರಂ ಆದರು.
ಪ್ರತಿಭಟನಾಕಾರರ ಹೋರಾಟ ಹತ್ತಿಕ್ಕಲು ಪೊಲೀಸರು ಮುಂದಾದರು. ಈ ವೇಳೆ, ಪ್ರತಿಭಟಾನಾಕಾರರು ಹಾಗೂ ಪೊಲೀಸರ ಮಧ್ಯೆ ನೂಕು ನುಗ್ಗಲು ಉಂಟಾಗಿ ಸುಮಾರು 20 ನಿಮಿಷಗಳ ಕಾಲ ಬಸ್ ಅಲ್ಲಿಯೇ ನಿಂತಿತ್ತು. ಈ ವೇಳೆ ಮೋದಿಗೆ ವೋಟ್ ಹಾಕ್ತೀರಾ. ಇಲ್ಲಿ ಬಂದು ನಮ್ಮನ್ನ ಕೇಳ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಸ್ಗೆ ದಾರಿ ಬಿಡಲ್ವಾ? ಲಾಠಿ ಚಾರ್ಜ್ ಮಾಡಬೇಕಾ ಎಂದು ಗದರಿದರು.
ವೈಟಿಪಿಎಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕರನ್ನ ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಕಾರ್ಮಿಕರನ್ನ ಕೆಲಸಕ್ಕೆ ಮರು ನೇಮಕಾತಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಭದ್ರತೆ ಒದಗಿಸುವಂತೆ ಆಗ್ರಹಿಸಿದರು. ಅಲ್ಲದೇ ತುಂಗಭದ್ರಾ ಹಂಗಾಮಿ ಗುತ್ತಿಗೆ ಕಾರ್ಮಿಕರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸಿಎಂಗೆ ನಮ್ಮ ಮನವಿಗೆ ಸ್ಪಂದಿಸುವಂತೆ ಮನವಿ ಮಾಡಲು ಮುಂದಾದಾಗ ಪೊಲೀಸರು ತಡೆದಿದ್ದರಿಂದ ಕುಪಿತಗೊಂಡ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು ಎನ್ನಲಾಗಿದೆ.