ರಾಯಚೂರು: ದೇವದುರ್ಗದಿಂದ ಗೂಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಹತ್ತಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್ನಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ಮಾಡಲಾಯಿತು. ಗೂಗಲ್-ದೇವದುರ್ಗ, ಸುಂಕೇಶ್ವರಹಾಳ-ಗೂಗಲ್ ರಸ್ತೆ ಹಲವು ವರ್ಷಗಳಿಂದ ಹಾಳಾಗಿದ್ದು, ಓಡಾಟ ಕಷ್ಟವಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ರಸ್ತೆ ಕಾಮಗಾರಿ ಮಾತ್ರ ನಡೆದಿಲ್ಲ. ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು.
ಇಲ್ಲದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಗೂಗಲ್, ಗಾಗಲ್, ಯಾಟಗಲ್, ಇಟಗಿ, ಹೇರೂರು, ಕುರ್ಕಿಹಳ್ಳಿ, ಕೊಪ್ಪರ, ಅರಷಿಣಗಿ, ರಾಮನಾಳ, ಹಿರೇಬೂದೂರು, ಮಶಿನಾಳ, ಮಾತ್ಪಳಿ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.