ರಾಯಚೂರು: ಪರಿಶಿಷ್ಟ ಪಂಗಡದ ಪಂಗಡಕ್ಕೆ ಶೇ. 7.5 ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ, ನಿವೃತ್ತ ನೌಕರರ ಸಂಘ, ಅಖಿಲ ಕರ್ನಾಟಕ ವಾಲ್ಮಿಕಿ ನಾಯಕ ಮಹಾಸಭಾ ಸೇರಿದಂತೆ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಲಿಂಗಸುಗೂರು ರಸ್ತೆಯ ಮಹರ್ಷಿ ವಾಲ್ಮೀಕಿ ಪುತ್ಥಳಿಯಿಂದ ಬಸವೇಶ್ವರ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಯಿತು. ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಪ.ಪಂಗಡದವರು 42,48,987 ಇದ್ದು, ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 6.95ರಷ್ಟಿದ್ದಾರೆ. ಕಳೆದ 8 ವರ್ಷಗಳಿಂದ ಶೇ. 7.5 ಮೀಸಲಾತಿ ನೀಡಲು ಹೋರಾಟ ಮಾಡುತ್ತಾ ಬಂದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಸಮಾಜಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಕೇವಲ ಶೇ. 3ರಷ್ಟು ಮೀಸಲಾತಿ ಇದ್ದು, ಇದರಿಂದ ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗಿದೆ.
ಅಲ್ಲದೆ ಕುರುಬ, ಗೊಂಡ, ರಾಜಗೊಂಡ ಇತರೆ ಸಮಾಜದವರು ಎಸ್ಟಿ ಪ್ರಮಾಣಪತ್ರ ಪಡೆಯುವ ಮೂಲಕ ನಮ್ಮ ಹಕ್ಕು ಕಸಿದುಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.