ರಾಯಚೂರು: ಈ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಪತ್ರಕರ್ತರಾಗಿರುವ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಖಂಡಿಸಿ ಪ್ರಗತಿಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿವೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನರಸಿಂಹಮೂರ್ತಿ ಅವರನ್ನು ಬಂಧಿಸಿರುವುದು ಖಂಡನೀಯ. ಈ ಹಿಂದೆ ವಿನೋದ ಎಂಬುವರು ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ನರಸಿಂಹಮೂರ್ತಿ ಅವರೇ ವಿನೋದ ಅಂತ ಆರೋಪಿಸಿ ಬಂಧಿಸಿದ್ದಾರೆ ಎಂದು ಆರೋಪಿಸಿದರು.
ಗೌರಿ ಮೀಡಿಯಾ ಟ್ರಸ್ಟ್ ಕಾರ್ಯದರ್ಶಿಯಾಗಿರುವ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಅನೇಕ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡಿದ್ದು, ರಾಜ್ಯ ಸರ್ಕಾರ ಫ್ಯಾಸಿಸ್ಟ್ ಧೋರಣೆಯಿಂದ ಅವರನ್ನು ಅನುಮಾನಾಸ್ಪದವಾಗಿ ಬಂಧಿಸಿದೆ. ಸರ್ಕಾರದ ಈ ಕ್ರಮ ಸರಿಯಲ್ಲ, ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನರಸಿಂಹಮೂರ್ತಿ ಅವರು ಬೆಂಗಳೂರಿನಲ್ಲಿದ್ದುಕೊಂಡು ಹಲವಾರು ವರ್ಷಗಳಿಂದ ಗೌರಿ ಲಂಕೇಶ್ ಟ್ರಸ್ಟ್ ಕಾರ್ಯದರ್ಶಿ, ನ್ಯಾಯಪಥ ಪತ್ರಿಕೆಯ ಸಾರಥಿ, ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರೇನು ಪರದೇಶದಿಂದ ಬಂದವರಲ್ಲ. ಹೀಗಿದ್ದರೂ 25 ವರ್ಷಗಳ ಹಿಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಇತ್ತೀಚಿಗೆ ಬಂಧಿಸಿರುವುದು ಸರಿಯಲ್ಲವೆಂದು ಪ್ರತಿಭಟನಾಕಾರರು ಕಿಡಿಕಾರಿದರು.