ರಾಯಚೂರು: ನಗರದ ಹೊರವಲಯದ ಯರಮರಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ರಾಯಚೂರು ವಿಮಾನ ನಿಲ್ದಾಣದ ಕುರಿತು ಸೋಮವಾರ ಜಿಲ್ಲಾಡಳಿತದಿಂದ ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದ ಹೊರವಲಯದ ಯರಮರಸ್ ಬಳಿ ವಿಮಾನ ನಿಲ್ದಾಣಕ್ಕಾಗಿ ಸುಮಾರು 400 ಎಕರೆ ಭೂಮಿ ನಿಗದಿ ಪಡಿಸಿದ್ದು, ಇದೇ ಸೋಮವಾರ ಭಾರತ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ವಿಮಾನ ನಿಲ್ದಾಣ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಅಧಿಕಾರಿಗಳು ನಿಗದಿತ ವಿಮಾನ ನಿಲ್ದಾಣ ಸ್ಥಳ ಪರಿಶೀಲನೆ ನಡೆಸಿ ನಿಲ್ದಾಣದ ಗಡಿ, ರನ್ ವೇ ಯಾವ ಸ್ಥಳದಲ್ಲಿ ಬರಬೇಕು, ನಿಲ್ದಾಣದಲ್ಲಿ ಅತ್ಯಾವಶ್ಯಕ ಸೌಲಭ್ಯಗಳ ಕುರಿತು ಮುಂದಿನ ಒಂದು ವಾರದಲ್ಲಿ ಸ್ಥಳ ನಿಗದಿಪಡಿಸಿ ಆಯಾ ಸ್ಥಳಗಳಲ್ಲಿ ಧ್ವಜಗಳನ್ನು ಹಾಕಬೇಕು ಎಂದು ಸೂಚಿಸಿದರು.
ವಿಮಾನ ನಿಲ್ದಾಣ ಕಾಮಗಾರಿ ನಿರ್ವಹಣಾ ಸಂಸ್ಥೆಯಾದ ಸುಪ್ರೀಂ ಏರ್ಲೈನ್ಸ್ ಮುಖಸ್ಥ ಅಮಿತ ಕೆ. ಅಗ್ರವಾಲ ಮಾತನಾಡಿ, ವಿಮಾನ ನಿಲ್ದಾಣಕ್ಕೆ ನಿಗದಿಪಡಿಸಿರುವ ಯರಮರಸ್ ಬಳಿಯ ವಿದ್ಯುತ್ ಘಟಕದ ಚಿಮಣಿಗಳಿಂದ ವಿಮಾನ ನಿಲ್ದಾಣ ಕಾಮಗಾರಿಗೆ ಯಾವುದೇ ರೀತಿ ಅಡ್ಡಿಯಾಗುವುದಿಲ್ಲ.
ರನ್ ವೇ ನಿರ್ಮಾಣಕ್ಕೆ 2 ಕಿ.ಮೀ ಸಾಕಾಗಿದೆ. ಕಾಮಗಾರಿ ಆರಂಭಕ್ಕೆ ಅನುಮತಿ ದೊರೆತಲ್ಲಿ ಮುಂದಿನ ಆರು ತಿಂಗಳ ಕಾಲ ಭೂಮಿ ಹಾಗೂ ಮಣ್ಣಿನ ಪರೀಕ್ಷೆ ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.