ರಾಯಚೂರು: ಸರ್ಕಾರ ಯೋಜನೆ ರೂಪಿಸಿ ಅನುದಾನ ನೀಡುತ್ತದೆ. ಆದರೆ ಅವುಗಳ ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಅರಿತು ಕಾರ್ಯನಿರ್ವಹಿಸಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಲವು ಕಾರಣಗಳಿಂದ ಸಭೆ ನಡೆಸಲು ವಿಳಂಬವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಪ್ರಮುಖವಾಗಿ ಈ ಭಾಗದ ರೈಲು ಯೋಜನೆ, ಗ್ರಾಮೀಣ ಕುಡಿಯುವ ನೀರು ಯೋಜನೆ, ವಸತಿ ಯೋಜನೆಗಳು ಪ್ರಗತಿಯಲ್ಲಿದ್ದು, ಇವುಗಳ ಅನುಷ್ಠಾನದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜಿಲ್ಲಾಡಳಿತದೊಂದಿಗೆ ಅನೇಕ ಯೋಜನೆಗಳ ಕುರಿತು ಚರ್ಚಿಸಲಾಗಿದ್ದು, ಸರ್ಕಾರದ ಅನುದಾನ ಜೊತೆಗೆ ಇಲಾಖೆಯ ಅನುದಾನ ಬಳಸಿಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ವಸತಿ ಯೋಜನೆಗಳಲ್ಲಿ ಅವ್ಯಹಾರ ನಡೆದಿಲ್ಲ. ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಜಿಲ್ಲೆಯ ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ಜನರ ಮನ ಸ್ಥಿತಿ ಬದಲಾಗದ ಹಿನ್ನೆಲೆ ಇನ್ನೂ ಬಯಲು ಶೌಚಾಲಯ ಬಳಕೆಯಲ್ಲಿದೆ ಎಂದರು.