ರಾಯಚೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಿಂದಾಗಿ ಬಂದ್ ಆಗಿರುವ ಖಾಸಗಿ ಬಸ್ ಸಂಚಾರ ಇನ್ನು ಎರಡು-ಮೂರು ದಿನಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತು ನಡೆದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಖಾಸಗಿ ಬಸ್ ಆರಂಭದ ಕುರಿತಂತೆ ಈಗಾಗಲೇ ಖಾಸಗಿ ಬಸ್ ಮಾಲೀಕರ ಸಂಘದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಈಗಿರುವ ಬಸ್ ದರಕ್ಕಿಂತ ಶೇ. 50ರಷ್ಟು ಹೆಚ್ಚಳ ಮಾಡುವ ಮೂಲಕ ಬಸ್ ಸಂಚಾರಕ್ಕೆ ಅವಕಾಶ ಕೊಂಡುವಂತೆ ಕೇಳಿದ್ದಾರೆ. ಆದರೆ ಶೇ. 15ರಷ್ಟು ಹೆಚ್ಚಳ ಮಾಡಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದರು.
ಮಹಾರಾಷ್ಟ್ರದ ಕೆಲ ಪಟ್ಟಣಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಅಂತಹ ಪಟ್ಟಣಗಳಿಂದ ನಮ್ಮ ರಾಜ್ಯದವರು ಬಂದಿರುವುರಿಂದ ಕೊರೊನಾ ಪ್ರಕರಣ ಜಾಸ್ತಿಯಾಗಿವೆ. ರಾಯಚೂರು ಜಿಲ್ಲೆಗೆ ಬಂದವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ನಮ್ಮ ಹೋರಾಟ ಕೊರೊನಾ ವಿರುದ್ಧವೇ ಹೊರತು, ವ್ಯಕ್ತಿಯ ವಿರುದ್ಧವಲ್ಲ. ಕೊರೊನಾ ಬಂದವರು ನಮ್ಮವರು. ಅವರಿಗೆ ಆಕಸ್ಮಿಕವಾಗಿ ತಗುಲಿರುವಂತಹದು. ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದ್ವಿಚಕ್ರ ವಾಹನದಲ್ಲಿ ಸಹ ಒಬ್ಬರು ಓಡಾಡಬೇಕು ಎಂದರು.
ಕೊರೊನಾ ತಿಂಗಳಲ್ಲಿ ಮುಗಿಯುತ್ತೆ ಎನ್ನುವ ಭ್ರಮೆಯಲ್ಲಿದ್ದರೆ ಅದರಿಂದ ಹೊರಗೆ ಬರಬೇಕು. ಇದು ಯಾವಾಗ ಮುಕ್ತಾಯವಾಗುತ್ತದೆ ಎಂಬುವುದು ಯಾರಿಗೂ ತಿಳಿದಿಲ್ಲ. ರಾಯಚೂರು ಜಿಲ್ಲೆಯಲ್ಲಿ ಇದೀಗ ಕೊರೊನಾ ಆರಂಭವಾಗಿದೆ. ಇದರ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಸಾಥ್ ನೀಡಬೇಕು ಎಂದರು.
ಸೇವಾ ಮನೋಭಾವದ ಉದ್ದೇಶದಿಂದ ಬಸ್ ಸೇವೆಯನ್ನು ಸಾರಿಗೆ ಸಂಸ್ಥೆಗಳಿಗೆ ನಷ್ಟವಾದರೂ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿ ಬಸ್ ಸೇವೆ ಪ್ರಾರಂಭಿಸಲಿವೆ. ರೆಡ್ ಝೋನ್ಗಳಲ್ಲಿ ಬಸ್ ಸಂಚಾರಕ್ಕೆ ಅವಕಾಶವಿಲ್ಲರುವುದಿಲ್ಲ ಎಂದಿದ್ದಾರೆ.