ರಾಯಚೂರು: ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯ ಬಳಿಕ ಮತ ಎಣಿಕೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 172 ಗ್ರಾಮ ಪಂಚಾಯಿತಿಗಳಿವೆ, ಒಟ್ಟು 9,97,890 ಮಂದಿ ಮತದಾರರಿದ್ದಾರೆ. ಎರಡು ಹಂತದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ.78.25ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದರು.
ಚುನಾವಣೆಗಾಗಿ 1,599 ಮತಗಟ್ಟೆಗಳ ಪೈಕಿ, 1,487 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಒಟ್ಟು 1,181 ಕ್ಷೇತ್ರಗಳಿದ್ದು, 417 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಳೆ ನಡೆಯುವ ಮತ ಎಣಿಕೆಗಾಗಿ 7 ತಾಲೂಕುಗಳಲ್ಲಿ 73 ಕೋಣೆಗಳು, 461 ಮೇಜುಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆಗಾಗಿ 1,383 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 114 ಸಿಬ್ಬಂದಿ ನೇಮಿಸಲಾಗಿದೆ ಎಂದರು.
ಕೊರೊನಾ ಭೀತಿಯಿಂದಾಗಿ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಸಾನಿಟೈಸೇಷನ್, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಧರಿಸುವುದು ಕಡ್ಡಾಯ. ಕೋವಿಡ್-19 ನಿಯಮಗಳನ್ನು ಪಾಲನೆ ಮಾಡಲು ಸೂಚಿಸಲಾಗಿದೆ. ಎಣಿಕೆ ಕೇಂದ್ರದ ಸುತ್ತಮುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಶಾಂತಿಯುತವಾಗಿ ಎಣಿಕೆ ಕಾರ್ಯ ನಡೆಯಲು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಯ 3 ಡಿವೈಎಸ್ಪಿ, 9 ಸಿಪಿಐ, 31 ಪಿಎಸ್ಐ, 84 ಎಎಸ್ಐ, 778 ಹೆಚ್ ಸಿ ಹಾಗೂ ಪಿಸಿಗಳು ಹಾಗೂ 46 ಗೃಹ ರಕ್ಷಕ ಸಿಬ್ಬಂದಿ, 10 ಡಿಎಆರ್ ತುಕಡಿ, 4 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿ ವಿವರಿಸಿದರು.
ಓದಿ: ಗ್ರಾಮ ಭವಿಷ್ಯ: ತುಮಕೂರು ಜಿಲ್ಲೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ