ರಾಯಚೂರು: ಜಿಲ್ಲೆಯ ರೈತರ ಜೀವನಾಡಿಯಾದ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯ ಸುಮಾರು 1 ಕಿಮೀನಷ್ಟು ಕೊಚ್ಚಿ ಹೋಗಿದ್ದ ಲೈನಿಂಗ್ ಕಾಮಗಾರಿ, ಇದೀಗ ಮತ್ತಷ್ಟು ವಿಸ್ತಾರಗೊಂಡು ಭಾರಿ ಅಪಾಯ ಸೃಷ್ಟಿಸಿದೆ.
ಸೋಮವಾರ ಕೇವಲ 500 ಕ್ಯೂಸೆಕ್ ನೀರು ಹೊರ ಬಿಡಲಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದ ಮುಖ್ಯ ನಾಲೆಯ ಲೈನಿಂಗ್ ಕಾಮಗಾರಿ, ಇದೀಗ ಅಧಿಕಾರಿಗಳು ಹಾಗೂ ಗುತ್ತಿಗೆದಾರ ನಿರ್ಲಕ್ಷ್ಯದಿಂದ ವಿಸ್ತಾರಗೊಳ್ಳುತ್ತ ಸಾಗಿದೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಲಕ್ಷಾಂತರ ಎಕರೆ ಜಮೀನಿಗೆ ನೀರು ಹರಿಸುವ ಮುಖ್ಯ ನಾಲೆಯ ಆಧುನೀಕರಣ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರ್ಬಳಕೆ, ಕಳಪೆ ಕಾಮಗಾರಿ ಬಗ್ಗೆ ಆರೋಪಗಳು ಕೇಳಿ ಬಂದಿದ್ದರೂ ಕೂಡ, ಕೃಷ್ಣ ಭಾಗ್ಯ ಜಲ ನಿಗಮದ ಇಂಜಿನಿಯರ್ಗಳು ಇದಾವುದಕ್ಕೂ ಉತ್ತರಿಸುತ್ತಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಆಧುನೀಕರಣ ಕಾಮಗಾರಿಯ ಕಿ.ಮೀ ಒಂದಕ್ಕೆ ಕನಿಷ್ಠ ರೂ. 10 ಕೋಟಿ ಖರ್ಚು ಮಾಡಲಾಗುತ್ತಿದೆ. ಬಹಳಷ್ಡು ಕಡೆ ಗುಣಮಟ್ಟದ ಕಬ್ಬಿಣದ ಸರಳು ಬಳಸಿಲ್ಲ ಎಂಬುದಕ್ಜೆ ಕೊಚ್ಚಿ ಹೋದ ಲೈನಿಂಗ್ ಸಾಕ್ಷಿಯಾಗಿದೆ. ಮಣ್ಣಿನ ಏರಿ ಕೊಚ್ಚಿ ಹೋಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿಗೆ ಮುಂದಾಗದಿದ್ದರೆ ಹೋರಾಟ ನಡೆಸುವುದಾಗಿ ರೈತಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.