ರಾಯಚೂರು: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್ ಅನುಮತಿ ಕಡ್ಡಾಯವಾಗಿದ್ದು, ಈ ವರ್ಷ ವಾರ್ಡಿಗೆ ಒಂದೇ ಗಣೇಶ ಸ್ಥಾಪನೆ ಮಾಡಲು ಅನುಮತಿಗಾಗಿ ಗಣೇಶ ಮಂಡಳಿ ಸದಸ್ಯರು ಏಕ ಗವಾಕ್ಷಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದರು.
ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವ ಗಣೇಶ ಮಂಡಳಿಗೆ ಅನುಮತಿ ನೀಡಲು ನಗರದ ಸರ್ದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಏಕ ಗವಾಕ್ಷಿ ಕೇಂದ್ರ ಸ್ಥಾಪಿಸಲಾಗಿದೆ. ಇನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಗಣೇಶ ಹಬ್ಬ ಶಾಂತಿ ಸಭೆಯಲ್ಲಿ ವಾರ್ಡಿಗೆ ಒಂದೇ ಒಂದು ಗಣೇಶ ಸ್ಥಾಪನೆ ಹಾಗೂ ಐದು ದಿನ ಮಾತ್ರ ಸ್ಥಾಪನೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರತಿವರ್ಷ ಒಂದು ವಾರ್ಡಿನಲ್ಲಿ ಐದರಿಂದ ಆರು ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರದ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿರುವುದರಿಂದ ಅನುಮತಿ ಪಡೆದುಕೊಳ್ಳಲು ಗಣೇಶ ಮಂಡಳಿ ಸದಸ್ಯರು ಠಾಣೆಗೆ ಆಗಮಿಸುತ್ತಿದ್ದಾರೆ. ನಗರದಲ್ಲಿ 32 ವಾರ್ಡಗಳಿದ್ದು, ಸಮಾರು 18 ಕ್ಕೂ ಅಧಿಕ ವಾರ್ಡ್ಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲಾಗಿದೆ.
ಇನ್ನು ಕೆಲವು ವಾರ್ಡ್ಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಗಣೇಶ ಮಂಡಳಿ ಸದಸ್ಯರು ಅರ್ಜಿ ಸಲ್ಲಿಸಲು ಮುಂದಾಗಿದ್ದು, ಅವುಗಳಿಗೆ ಇನ್ನೂ ಒಪ್ಪಿಗೆ ನೀಡಿಲ್ಲ. ನಗರದ 32 ವಾರ್ಡ್ಗಳಲ್ಲಿ ಕೆಲ ವಾರ್ಡ್ಗಳ ಗಣೇಶ ಮಂಡಳಿಗಳು ಈ ವರ್ಷ ಗಣೇಶ ಪ್ರತಿಷ್ಠಾಪನೆಯಿಂದ ದೂರ ಉಳಿದಿದ್ದು, ಕೊರೊನಾ ಹಿನ್ನೆಲೆ ಬೆರಳೆಣಿಕೆಯಷ್ಟು ಮಾತ್ರ ಸಾರ್ವಜನಿಕ ಗಣೇಶ ವಿಗ್ರಹಗಳು ಪ್ರತಿಷ್ಠಾಪನೆಗೊಳ್ಳಲಿವೆ.