ರಾಯಚೂರು : ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರ ದತ್ತಪೀಠ ಸೇರಿದಂತೆ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಯನ್ನು ಜಿಲ್ಲಾಡಳಿತ ಶೀಘ್ರವಾಗಿ ಮುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಚಂದ್ರಬಂಡಾ ಹೋಬಳಿಯ ಕೃಷ್ಣಾ ನದಿಯ ನಡುಗಡ್ಡೆಗಳಾದ ಕುರ್ವಕುಂದಾ, ಕುರ್ವಕಲಾ, ಅಗ್ರಹಾರ (ದತ್ತ ಪೀಠ) ಮಂಗಿಗಡ್ಡೆ, ನಾರದಗಡ್ಡೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ದಶಕಗಳಿಂದ ನೆನೆಗುದ್ದಿಗೆ ಬಿದ್ದಿದೆ. ನಡುಗಡ್ಡೆ ನಿವಾಸಿಗಳು ಸಂಚಾರಕ್ಕಾಗಿ ನದಿಯಲ್ಲಿ ತೆಪ್ಪದ ಮೂಲಕ ಸಂಚರಿಸುವುದು ಅನಿವಾರ್ಯವಾಗಿದೆ. ಎರಡು ದಿನಗಳ ಹಿಂದೆ ನೆರೆಯ ತೆಲಂಗಾಣದ ನಾರಾಯಣಪೇಟೆ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ದುರಂತ ಸಂಭವಿಸಿ, ಇದೇ ಕುರ್ವಕುಲಾ ನಡುಗಡ್ಡೆಯ ನಾಲ್ವರು ನದಿಯಲ್ಲಿ ಕೊಚ್ಚಿ ಹೋಗಿದ್ದರು. ಹೀಗಾಗಿ, ಜಿಲ್ಲಾಡಳಿತ ನಡುಗಡ್ಡೆಯ ತೆಪ್ಪಗಳನ್ನು ವಶಕ್ಕೆ ಪಡೆದಿದೆ. ಇದರಿಂದ ಇಲ್ಲಿನ ಜನರಿಗೆ ಹೊರ ಜಗತ್ತಿನ ಸಂಪರ್ಕ ಕಡಿತಗೊಂಡಿದೆ.
ನಡುಗಡ್ಡೆಗಳಲ್ಲಿ ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ತುರ್ತು ಆರೋಗ್ಯ ಸೇವೆ, ಸಂಚಾರ ಸೇರಿದಂತೆ ಹಲವು ಬೇಡಿಕೆಗಳ ಶಾಶ್ವತ ಪರಿಹಾರಕ್ಕಾಗಿ ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ದಶಕಗಳ ಹಿಂದೆ ಪ್ರಾರಂಭವಾದ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದೆ. ಆದ್ದರಿಂದ ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕೆಂದು ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
1978 ರಲ್ಲಿ ಆಂಧ್ರಪ್ರದೇಶ ಸರ್ಕಾರ ಜುರಾಲಾ ಪ್ರಿಯದರ್ಶಿನಿ ಜಲಾಶಯ ಯೋಜನೆ ಜಾರಿಗೆ ತಂದ ಸಂದರ್ಭದಲ್ಲಿ, ಜಲಾಶಯದ ಹಿನ್ನೀರಿನ ಈ ಪ್ರದೇಶದ ಜನರ ಸಂರ್ಪಕ್ಕೆ ಸೇತುವೆ ನಿರ್ಮಾಣಕ್ಕಾಗಿ 40 ಕೋಟಿ ರೂ. ರಾಯಚೂರು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿತ್ತು. ಇಂದು ಆ ಹಣ ಬಡ್ಡಿ ರೂಪದಲ್ಲಿ ಎರಡರಷ್ಟಾಗಿದೆ. ಸೇತುವೆ ಕಾಮಗಾರಿ ನಡೆಸಲು ಗುತ್ತಿಗೆ ವಹಿಸಿಕೊಂಡವರು ಅರೆಬರೆ ಕಾಮಗಾರಿ ನಡೆಸಿ ಗುತ್ತಿಗೆಯಿಂದ ಹಿಂದೆ ಸರಿದ ಕಾರಣ ಪ್ರಸ್ತುತ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದೆ. ಆದರೂ ಕಾಮಗಾರಿ ಮಾತ್ರ ವೇಗ ಪಡೆದಿಲ್ಲ. ಹೀಗಾಗಿ ಜನ ಇಂದಿಗೂ ಸಂಪರ್ಕಕ್ಕೆ ಪರದಾಡಬೇಕಾದ ಪರಿಸ್ಥಿತಿಯಿದೆ.