ರಾಯಚೂರು: ಶಾಲೆಗೆ ಚಕ್ಕರ್ ಹಾಕುವ ಶಿಕ್ಷಕರು ಗುಂಡು ಪಾರ್ಟಿ ಮಾಡುತ್ತಾರೆ ಎಂಬ ಆರೋಪ ಜಿಲ್ಲೆಯ ಹಟ್ಟಿಯಲ್ಲಿರುವ ಸರ್ಕಾರಿ ಶಾಲಾ ಶಿಕ್ಷಕರ ವಿರುದ್ಧ ಕೇಳಿ ಬಂದಿದೆ. ಶಾಲಾ ಅವಧಿಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸುವ ಶಿಕ್ಷಕರು ಡಾಬಾದಲ್ಲಿ ಚಿಕನ್, ಮಟನ್ ಸೇವಿಸುತ್ತಿದ್ದಾರೆ. ಇದಕ್ಕಾಗಿ ಮಧ್ಯಾಹ್ನ ನಂತರದ ತರಗತಿಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಶಿಕ್ಷಕರು ಡಾಬಾದಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋವನ್ನು ಪೋಷಕರು ಸೆರೆ ಹಿಡಿದಿದ್ದಾರೆ. ಜೊತೆಗೆ ಶಾಲೆಯ ತರಗತಿ ಕೊಠಡಿಗಳಲ್ಲೂ ಮೊಬೈಲ್ನಲ್ಲಿ ಜಿಪಿಎಸ್ ಸಮೇತ ಪೋಷಕರು ಫೋಟೋ ಸೆರೆ ಹಿಡಿದ್ದಾರೆ.
ಈ ಬಗ್ಗೆ ಲಿಂಗಸೂಗೂರು ಬಿಇಒ ಹೊಂಬಣ್ಣ ರಾಠೋಡ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, 'ಸುದ್ದಿ ತಿಳಿದ ಕೂಡಲೇ ಡಿಡಿಪಿಐ ಹಾಗೂ ಸಿಬ್ಬಂದಿಯೊಂದಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಡಿಡಿಪಿಐ ಕ್ರಮ ಕೈಗೊಳ್ಳುತ್ತಾರೆ. ಪ್ರೌಢಶಾಲಾ ಮುಖ್ಯಗುರುಗಳ ಬಗ್ಗೆ ಆಯುಕ್ತರಿಗೆ ವರದಿ ಕಳುಹಿಸಲಾಗಿದೆ. ಅವರ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ವೃಷಬೇಂದ್ರಯ್ಯ, ಶಿಕ್ಷಕರನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮುಖ್ಯ ಶಿಕ್ಷಕರ ವಿರುದ್ಧ ಕ್ರಮಕ್ಕೆ ಕಲಬುರಗಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಿದ್ದೇವೆ ಎಂದರು.
ಇದನ್ನೂ ಓದಿ: ಹೆಚ್ಚುತ್ತಿರುವ ರೌಡಿಗಳ ಅಟ್ಟಹಾಸ: ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ