ರಾಯಚೂರು: ನಾರಾಯಣಪುರ (ಬಸವಸಾಗರ) ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಿರುವ ಹಿನ್ನೆಲೆಯಲ್ಲಿ ಕೃಷ್ಣ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ.
ರಾಯಚೂರು ಜಿಲ್ಲೆಯ ರೋಡಲಬಂಡಾ ಗ್ರಾಮದ ಬಳಿ ಇರುವ ನಾರಾಯಣಪುರ ಜಲಾಶಯ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಜೀವನಾಡಿಯಾಗಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ಬೆಳಗ್ಗೆ 8 ಗಂಟೆಗೆ 1 ಲಕ್ಷ ಕ್ಯೂಸೆಕ್ ನೀರು ಒಳಹರಿವು ಉಂಟಾಗಿತ್ತು. ಜಲಾಶಯದ 18 ಗೇಟ್‌ಗಳ ಮೂಲಕ 1,02240 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
ಸದ್ಯ ಆಲಮಟ್ಟಿ ಜಲಾಶಯದಿಂದ 91942 ಕ್ಯೂಸೆಕ್ ನೀರಿನ್ನ ಹರಿದು ಬಿಟ್ಟ ಹಿನ್ನೆಲೆಯಿಂದಾಗಿ ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿ, ನದಿಗೆ ನೀರು ಹರಿಸಲಾಗ್ತಿದೆ. ಸದ್ಯ 33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ನಾರಾಯಪುರ ಜಲಾಶಯಕ್ಕೆ 29 ಟಿಎಂಸಿಯಷ್ಟು ಪ್ರಮಾಣದ ನೀರು ಶೇಖರಣೆಯಾಗಿದೆ.