ರಾಯಚೂರು: ಜಮೀನು ಪೋಡಿ ಮಾಡಿ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಲು ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಮಾನ್ವಿ ಭೂ ಮಾಪಕ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಗ್ರಾಮದ ನಿವಾಸಿ ಶಿವರಾಜಪ್ಪ ಅವರಿಗೆ ಸಂಬಂಧಿಸಿದ 21 ಗುಂಟೆ ಜಮೀನಿಗೆ ಸಂಬಂಧಪಟ್ಟಂತೆ ಪೋಡಿ ಮಾಡಿ ಭೂ ದಾಖಲೆಗಳ ಮಾನವಿ ಸಹಾಯಕ ನಿರ್ದೇಶಕರ ಕಾರ್ಯಾಲಯಕ್ಕೆ ಸಲ್ಲಿಸಬೇಕಿತ್ತು. ಆದರೆ ಭೂ ಮಾಪಕ ಖಾದರ್ ಸಾಬ್ ತಂದೆ ಅಮಾನುಲ್ಲಾ ಇದಕ್ಕೆ 8,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಜಮೀನಿನ ಮಾಲೀಕರ ಮಗ ಶಾಶ್ವತರೆಡ್ಡಿ ಭಷ್ಟ್ರಚಾರ ನಿಗ್ರಹ ದಳದ ಠಾಣೆಗೆ ದೂರು ದಾಖಲಿಸಿದ್ದರು.
ದೂರಿನನ್ವಯ ಅಕ್ಟೋಬರ್ 19ರಂದು ಭೂ ಮಾಪಕ ಖಾದರ್ ಸಾಬ್, ತಾವು ವಾಸವಿದ್ದ ರಾಯಚೂರು ನಗರದ ಬಾಲಾಜಿ ಕಾಂಪ್ಲೆಕ್ಸ್, ಗುಡ್ ಶೆಡ್ ರೋಡ್, ಸ್ಟೇಷನ್ ಏರಿಯಾ ರೂಮಿನಲ್ಲಿ ಫಿರ್ಯಾದಿಯಿಂದ 8,000 ರೂಪಾಯಿಗಳ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ರಾಯಚೂರು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಸಂತೋಷ್ ಬನ್ನಟ್ಟಿ ಮತ್ತು ಪಿ.ಐ ಎಚ್.ಬಿ. ಸಣಮನಿ ಹಾಗೂ ಸಿಬ್ಬಂದಿ ವಿನೋದ್ ರಾಜ್, ಮುರಳಿ, ವಿಕ್ರಂಸಿಂಹರೆಡ್ಡಿ, ಮನೀಷ್ ಕುಮಾರ, ರಾಜಪ್ಪ, ಬಸವರಾಜೇಶ್ವರಿ, ರಮೇಶ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಇವರನ್ನು ದಸ್ತಗಿರಿ ಮಾಡಿ ಲಂಚದ ಹಣ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಭ್ರಷ್ಟಚಾರ ನಿಗ್ರಹದಳದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.