ಲಿಂಗಸುಗೂರು: ಇಲ್ಲಿನ ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿ ಕಳಪೆಯಿಂದ ಕೂಡಿದ್ದು ಸ್ಥಳದಲ್ಲಿ ಇಂಜಿನಿಯರ್ಗಳಿಲ್ಲ ಎಂದು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಗುರುವಾರ ಲಿಂಗಸುಗೂರು ತಾಲ್ಲೂಕು ವ್ಯಾಪ್ತಿಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿ ಸ್ಥಳದಲ್ಲಿ ಕಾಲುವೆ ತೋಡಿದ್ದ ಹಳೆಯ ಮಣ್ಣನ್ನು ಮರು ಬಳಕೆ ಮಾಡುತ್ತಿದ್ದಾರೆ. ಕ್ಯೂರಿಂಗ್ ಸರಿಯಾಗಿ ಆಗುತ್ತಿಲ್ಲ. ಬಹುತೇಕ ಸ್ಥಳಗಳಲ್ಲಿ ನಿಗದಿತವಾಗಿ ಕಬ್ಬಿಣ ರಾಡ್ ಬಳಸಿಲ್ಲ. ಇನ್ನೂ ಕೆಲವೆಡೆ ಕಬ್ಬಿಣ ಬಳಕೆ ಮಾಡದೆ ಕಳಪೆ ಕಾಮಗಾರಿ ನಡೆದಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದಿದ್ದಾರೆ.
ಕೃಷ್ಣಾ ಭಾಗ್ಯ ಜಲನಿಗಮದ ಯಾವೊಬ್ಬ ಇಂಜಿನಿಯರ್ ಕೆಲಸದ ಸ್ಥಳದಲ್ಲಿ ಹಾಜರಿದ್ದು ಅಂದಾಜಿನ ಪ್ರಕಾರ ಕೆಲಸ ಮಾಡಿಸುತ್ತಿಲ್ಲ. ಸಿಡಿಗಳನ್ನು ಮೇಲ್ದರ್ಜೆಗೆ ಏರಿಸುತ್ತಿಲ್ಲ. ತಡೆಗೋಡೆಗಳ ನಿರ್ಮಾಣವೂ ಇಲ್ಲದೆ ಗುತ್ತಿಗೆದಾರರ ಮನಸೋ ಇಚ್ಛೆ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ನಾಲೆ 95 ಕಿ.ಮೀ ಆಧುನೀಕರಣಕ್ಕೆ ರೂ. 956 ಕೋಟಿ ಹಣ ನೀಡಲಾಗಿದೆ. ಕಾಮಗಾರಿ ಪರಿಶೀಲನೆಗೆ ಮೂರನೇ ವ್ಯಕ್ತಿಗೆ ಅವಕಾಶ ಇರಬೇಕಿತ್ತು. ಆಧುನೀಕರಣ ಕಾಮಗಾರಿಯ ಲೋಪ ದೋಷ, ಕಳಪೆತನ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ನೀರಾವರಿ ಇಲಾಖೆ ಸಚಿವರು, ಕಾರ್ಯದರ್ಶಿಗೆ ಪತ್ರ ಬರೆದು ಅನಿವಾರ್ಯ ಎಂದಾದಲ್ಲಿ ರೈತರ ಜೊತೆಗೂಡಿ ಹೋರಾಟ ನಡೆಸುವೆ ಎಂದು ಎಚ್ಚರಿಕೆ ನೀಡಿದರು.