ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ 18 ಮರಳು ಗಣಿಗಾರಿಕೆ ಕೇಂದ್ರಗಳಲ್ಲಿ ಬ್ಲಾಕ್ 1 ಮತ್ತು 2 ರಲ್ಲಿ ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ ಕುರಿತು ಶ್ರೀರಾಮಸೇನೆ ನೇತೃತ್ವದಲ್ಲಿ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ್ದು, ಐದು ಸದಸ್ಯರ ತನಿಖಾ ತಂಡ ರಚಿಸಿ ವರದಿ ನೀಡಲು ಆದೇಶಿಸಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗದಲ್ಲಿರುವ ಮರಳು ಬ್ಲಾಕ್ 1ರ ಆನಂದ ದೊಡ್ಡ ಮನಿ ಹಾಗೂ ಬ್ಲಾಕ್ 2ರ ಪಿ ಎಲ್ ಕುಂಬ್ಳೆ ಅವರು ಗುತ್ತಿಗೆ ಪಡೆದಿದ್ದು, ಸರ್ಕಾರದ ನಿಯಮ ಉಲ್ಲಂಘಿಸಿ ಬೃಹತ್ ಯಂತ್ರಗಳನ್ನು ಬಳಕೆ ಮಾಡಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಸರ್ಕಾರದಿಂದ 12 ಟನ್‌ಗೆ ಪರವಾನಿಗೆ ಪಡೆದು, 40 ಟನ್ ಸಾಗಾಣಿಕೆ ಮಾಡುವ ಮೂಲಕ ಸರ್ಕಾರದ ಖಜಾನೆ ಕೊಳ್ಳೆ ಹೊಡೆಯುತ್ತಿರುವ ಕುರಿತು ಜಿಲ್ಲಾಡಳಿತ ಹಾಗೂ ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿತ್ತು, ಆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ತನಿಖಾ ತಂಡ ರಚಿಸಿ ಆದೇಶಿಸಿದೆ ಎಂದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿಪರೀತವಾಗಿದ್ದು, ನೆರೆಯ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅದಿರು ಗಣಿಗಾರಿಕೆ ರೀತಿಯಲ್ಲಿ ಇಲ್ಲಿಯೂ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದಾಗಿ ನದಿ ಮೂಲ ಹಾಗೂ ರಸ್ತೆಗಳು ಹಾಳಾಗಿವೆ ಎಂದ ಅವರು, ದೇವದುರ್ಗ ತಾಲೂಕಿನ ಜೋಳದ ಹಡಗಿ ಗ್ರಾಮದಲ್ಲಿ ನದಿಯಿಂದ ನೀರು ತರಲು ಹೋದ ಬಾಲಕಿ ಅಕ್ರಮ ಮರಳು ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದು, ಆಕೆಯ ಕುಟುಂಬಕ್ಕೆ ಪರಿಹಾರ ನೀಡಲು ಆದೇಶಿಸಿದೆ ಎಂದು ಮಾಹಿತಿ ನೀಡಿದರು.
ನಮ್ಮ ಹೋರಾಟದ ಫಲವಾಗಿ ಈ 18 ಬ್ಲಾಕ್ ಗಳಲ್ಲಿ ತಾತ್ಕಾಲಿಕವಾಗಿ ಮರಳು ಗಣಿಗಾರಿಕೆ ನಿಲ್ಲಿಸಲಾಗಿದೆ. ಮುಂದೆಯೂ ಕಾನೂನು ಪ್ರಕಾರ ಮರಳು ಗಣಿಗಾರಿಕೆ ನಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.