ರಾಯಚೂರು: ನಾರಾಯಣಪುರ ಜಲಾಶಯದ ಬಲದಂಡೆ ಮುಖ್ಯ ನಾಲೆ ಆಧುನೀಕರಣ ಮೂಲಕ ಜಿಲ್ಲೆಯ ಲಿಂಗಸುಗೂರು, ದೇವದುರ್ಗ, ರಾಯಚೂರು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಮಹತ್ವಾಕಾಂಕ್ಷೆಯ ಯೋಜನೆ ಕಳೆಪೆ ಕಾಮಗಾರಿಯಿಂದ ಈಗ ಹಳ್ಳ ಹಿಡಿದಿದೆ.
ಬಲದಂಡೆ ಮುಖ್ಯ ನಾಲೆ ಆಧುನೀಕರಣಕ್ಕೆ ರಾಜ್ಯ ಸರ್ಕಾರ 95 ಕಿ.ಮೀ. ಕಾಮಗಾರಿಗೆ 950 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಅಧಿಕಾರಿಗಳು 5 ತಿಂಗಳಲ್ಲಿಯೇ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದು, ಇದಕ್ಕೆ 650 ಕೋಟಿಯಷ್ಟು ಖರ್ಚು ಮಾಡಲಾಗಿದೆ ಎಂದು ದಾಖಲೆಯಲ್ಲಿ ತಿಳಿಸಿದ್ದಾರೆ.
ಕಾಮಗಾರಿ ಆರಂಭದಲ್ಲಿಯೇ ಕಿಲೋ ಮೀಟರ್ಗಟ್ಟಲೆ ಲೈನಿಂಗ್ ಕೊಚ್ಚಿ ಹೋಗಿದೆ. ರೈತರು ಮತ್ತು ಪ್ರಗತಿಪರ ಸಂಘಟನೆಗಳು ಈ ಕಾಮಗಾರಿಗೆ ಕಳಪೆ ಕಬ್ಬಿಣ, ಮರಳು ಬಳಸಲಾಗಿದೆ ಎಂದು ಹಲವು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇತ್ತಿಚೆಗೆ ಮಳೆಯ ನೀರು ನಾಲೆಯಲ್ಲಿ ಹರಿದಿದ್ದು, ಈ ನೀರಿನ ಹರಿವಿಗೆ ಕಿ.ಮೀ ಗಟ್ಟಲೆ ಲೈನಿಂಗ್ ಕೊಚ್ಚಿ ಹೋಗಿದೆ. ನಾಲೆಯಲ್ಲಿ ಬಹುತೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ವೀಕ್ಷಣಾ ರಸ್ತೆಗುಂಟ ಹಾಕಿದ ಮರಂ ಭಾಗಶಃ ಕೊಚ್ಚಿ ನಾಲೆಗೆ ಹರಿದಿದೆ. ಸಂಪರ್ಕ ರಸ್ತೆ ಅಭಿವೃದ್ಧಿ, ರೈತರ ಜಮೀನು ಸಂಪರ್ಕಿಸುವ ಕಾಲುದಾರಿ ದುರಸ್ತಿ ಮಾಡಿಲ್ಲ. ಪ್ರಗತಿಯಲ್ಲಿರುವಾಗಲೇ ಶೇ.80ರಷ್ಟು ಹಣ ದುರ್ಬಳಕೆಗೆ ಸಾಕ್ಷಿಯಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೃಷ್ಣಾ ಭೀಮಾ ಅಚ್ಚುಕಟ್ಟು ಪ್ರದೇಶ ರೈತ ಸಂಘ ರಾಜ್ಯಾಧ್ಯಕ್ಷ ಅಮರೇಶ ಒತ್ತಾಯಿಸಿದ್ದಾರೆ.