ರಾಯಚೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಲಾಶಯಗಳ ಒಳಹರಿವಿನ ಪ್ರಮಾಣ ಗಣನೀಯ ಏರಿಕೆಕಂಡಿದೆ. ಇನ್ನು ಜಿಲ್ಲೆಯ ನಾರಾಯಣಪುರ ಡ್ಯಾಂ ಸಹ ತುಂಬಿದ್ದು, 49 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದೆ.
ಮಹಾರಾಷ್ಟ್ರ ಭಾಗದಲ್ಲಿ ಮಳೆಯಿಂದ ಪ್ರವಾಹವೇ ಸೃಷ್ಟಿಯಾಗಿದ್ದು ಈ ಹಿನ್ನೆಲೆ ನಾರಾಯಣಪುರ ಡ್ಯಾಂ ನೀರಿನ ಪ್ರಮಾಣ ಏರಿಕೆಯಾಗಿದೆ. ಇದೀಗ ನೀರನ್ನು ಹೊರಬಿಡಲಾಗುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಇಲ್ಲಿನ ಲಿಂಗಸೂಗೂರು, ದೇವದುರ್ಗ, ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಕೃಷ್ಣ ನದಿ ಪಾತ್ರಕ್ಕೆ ಒಟ್ಟು 72 ಗ್ರಾಮಗಳು ಬರುತ್ತೇವೆ. ಈ 72 ಗ್ರಾಮಗಳಲ್ಲಿ 15,018 ಕುಟುಂಬಗಳು ನೆಲೆಯೂರಿದ್ದು, 82,168 ಜನರು ವಾಸಿಸುತ್ತಿದ್ದಾರೆ. ಲಿಂಗಸೂಗೂರು ತಾಲೂಕಿನ 3 ಹಾಗೂ ರಾಯಚೂರು ತಾಲೂಕಿನಲ್ಲಿ 3 ನಡುಗಡ್ಡೆ ಪ್ರದೇಶಗಳು ನದಿಯ ವ್ಯಾಪ್ತಿಗೆ ಬರಲಿವೆ.
ಸದ್ಯ ಮಹಾರಾಷ್ಟ್ರ, ಮಲೆನಾಡು ಭಾಗದಲ್ಲಿ ಅತಿಯಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಹೀಗಾಗಿ ಆಲಮಟ್ಟಿಯಿಂದ ನೀರು ನದಿಗೆ ಹರಿದು ಬಿಟ್ಟ ಪರಿಣಾಮ, ಜಿಲ್ಲೆಯ ವ್ಯಾಪ್ತಿಗೆ ಬರುವಂತಹ ನಾರಾಯಣಪುರ ಡ್ಯಾಂ ಒಳಹರಿವು ಹೆಚ್ಚಾಗಿ, ಈಗಾಗಲೇ 50 ಸಾವಿರ ಕ್ಯೂಸೆಕ್ಸ್ ಸನಿಹಕ್ಕೆ ನೀರು ಹೊರ ಬೀಡಲಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.
ಇನ್ನು ಪ್ರವಾಹ ಭೀತಿ ಹಿನ್ನೆಲೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ನದಿ ದಡಕ್ಕೆ ಅಳವಡಿಸಿರುವ ಪಂಪ್ ಸೆಟ್ಗಳನ್ನು ತೆಗೆಯುವಂತೆ ರೈತರಿಗೆ ಸೂಚಿಸಲಾಗಿದೆ. ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಕಳೆದ ಬಾರಿಯ ಪ್ರವಾಹದ ಕಹಿಯಿಂದ ಹೊರಬರುವ ಮುನ್ನವೇ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಆಡಳಿತ ಪ್ರವಾಹಕ್ಕೆ ಮುಂಜಾಗೃತಾ ಕ್ರಮ ಜರುಗಿಸಿ ಹಾನಿಯಾಗದಂತೆ ತಡೆಯಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.