ರಾಯಚೂರು: ಕಾಂಗ್ರೆಸ್ ಅತೃಪ್ತ ಶಾಸಕರಲ್ಲಿ ಒಬ್ಬರಾಗಿರುವ ಮಸ್ಕಿ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಅವರು ಈಗಾಗಲೇ ಸ್ಪೀಕರ್ ರಮೇಶ್ಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಅವರು ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಮುಂಬೈನಲ್ಲಿರುವ ಶಾಸಕ ಪ್ರತಾಪ್ಗೌಡ ಪಾಟೀಲ್ ಅವರು ತಮ್ಮ ರಾಜೀನಾಮೆ ಅಂಗೀಕಾರವಾದ ಬಳಿಕ ಬಿಜೆಪಿಗೆ ಸೇರುವುದಾಗಿ ಫೋನ್ ಮೂಲಕ ಸಂಪರ್ಕಿಸಿದಾಗ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿರುವ ಶಾಸಕ ಪ್ರತಾಪ್ ಗೌಡ ಪಾಟೀಲ್, ನಿನ್ನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ತೆರಳಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿದೆ. ರಾಜೀನಾಮೆ ಅಂಗೀಕಾರವಾದ ಬಳಿಕ ಬಿಜೆಪಿ ಸೇರ್ಪಡೆಯಾಗುತ್ತೇನೆ. ಜಿಲ್ಲೆಯ ಇನ್ನಿಬ್ಬರು ಶಾಸಕರು ರಾಜೀನಾಮೆ ನೀಡುವುದರ ಬಗ್ಗೆ ನನಗೆ ಮಾಹಿತಿ ಸಂಪರ್ಕವಿಲ್ಲ. ಇನ್ನು 8-10 ಜನ ಶಾಸಕರು ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಅವರು ರಾಯಚೂರು ಜಿಲ್ಲೆಯ ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಪ್ರತಾಪ್ಗೌಡ ಹೇಳಿದ್ದಾರೆ.
ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಪಕ್ಷದಲ್ಲಿ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು. ಆದರೆ ಪಕ್ಷ ನಮ್ಮನ್ನು ಕಡೆಗಣಿಸಿದೆ. ಹಿಂದೆ ಸಂಪೂರ್ಣ ಬಹುಮತದಿಂದ ಸರ್ಕಾರ ಇದ್ದಾಗಲೂ ಜಿಲ್ಲೆಯ ಯಾವೊಬ್ಬ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಮೈತ್ರಿ ಸರ್ಕಾರದಲ್ಲಿ ಪಕ್ಷೇತರ ಶಾಸಕರಿಗೆ ಮತ್ತು ಬ್ಲ್ಯಾಕ್ಮೇಲ್ ಮಾಡುವಂತರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದರು.
ಅಲ್ಲದೇ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಬೇಸರಗೊಂಡು ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯ ರಾಜೀನಾಮೆ ಸಲ್ಲಿಸಿದ ಎಲ್ಲಾ ಶಾಸಕರು ಮುಂಬೈನಲ್ಲಿದ್ದೇವೆ ಎಂದು ಅವರು ಹೇಳಿದರು.