ಲಿಂಗಸುಗೂರು( ರಾಯಚೂರು) : ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಾಣಗೊಂಡ ಮಲ್ಪಿಗ್ರೇನ್ಸ್ ಕ್ಲೀನಿಂಗ್, ಗ್ರೇಡಿಂಗ್, ಪ್ಯಾಕಿಂಗ್ ಘಟಕ ಪಾರಿವಾಳಗಳ ಗೂಡಾಗಿ ಪರಿವರ್ತನೆ ಗೊಂಡಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ರೈತ ಬೆಳೆದ ಜೋಳ, ಹೆಸರು, ಉದ್ದು, ಸೋಯಾಬೀನ್, ಗೋಧಿ ಮತ್ತಿತರ ದವಸ, ಧಾನ್ಯಗಳಲ್ಲಿ ಇರುವ ಕಸ, ಕಡ್ಡಿ, ಕಲ್ಲು, ಹೊಟ್ಟನ್ನು ಸ್ವಚ್ಛಗೊಳಿಸುವ, ಅವುಗಳ ಗಾತ್ರಕ್ಕೆ ತಕ್ಕಂತೆ ಗ್ರೇಡಿಂಗ್ ಮಾಡಿಕೊಳ್ಳಲು ಅನುಕೂಲವಾಗುವ ಯಂತ್ರ ವಿದ್ದು, ಇದು ಬಳಕೆಯಾಗದೇ ಧೂಳು ಹಿಡಿದಿದೆ.
2014-15ನೇ ಸಾಲಿನ ನಬಾರ್ಡ್‌ನ ವೇರ್‌ಹೌಸ್ ಇನ್‌ಫ್ರಾಸ್ಟ್ರಕ್ಚರ್ ಫಂಡ್(ಡಬ್ಲ್ಯೂಐಎಫ್) ಯೋಜನೆಯಡಿ 1.02 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಕೃಷಿಕರು ತಮ್ಮ ಹೊಲದಲ್ಲಿ ಬೆಳೆದ ದವಸ, ಧಾನ್ಯಗಳನ್ನು ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದು ಕ್ಲೀನಿಂಗ್, ಗ್ರೇಡಿಂಗ್, ಪ್ಯಾಕಿಂಗ್ ಮಾಡಿಕೊಳ್ಳುವ ಕನಸು ಕನಸಾಗೆ ಉಳಿದಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿ ಟೆಂಡರ್ ಕರೆದಿದ್ದು 10 ಲಕ್ಷ ರೂ. ಡಿಪೋಸಿಟ್ ಹಾಗೂ ವಾರ್ಷಿಕ ಬಾಡಿಗೆ ನಿಗದಿಗೆ ಯಾರು ಮುಂದಾಗುತ್ತಿಲ್ಲ. ಮೂರನೇ ಬಾರಿ ಕೇವಲ ರೂ 3ಲಕ್ಷ ಟೆಂಡರ್ ಕರೆದಿದ್ದರೂ ಯಾರೊಬ್ಬರು ಗುತ್ತಿಗೆ ಹಿಡಿಯಲು ಮುಂದಾಗುತ್ತಿಲ್ಲ. ಆಡಳಿತ ಮಂಡಳಿ ಸ್ವಂತವಾಗಿ ನಿರ್ವಹಿಸಲು ಮುಂದಾಗದೇ ಯಂತ್ರ ತುಕ್ಕು ಹಿಡಿಯುವಂತಾಗಿದೆ.
ಈ ಕುರಿತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲರೆಡ್ಡೆಪ್ಪ ಮಾತನಾಡಿ, ಈಗಾಗಲೇ ಘಟಕ ಗುತ್ತಿಗೆ ನೀಡಲು ಟೆಂಡರ್ ಕರೆದಿದೆ. ಯಾರೂ ಮುಂದೆ ಬರುತ್ತಿಲ್ಲ. ಎಪಿಎಂಸಿ ಕೆಲಸಗಾರರಿಂದ ನಿರ್ವಹಣೆ ಸಾಧ್ಯತೆ ಕುರಿತು ಚರ್ಚಿಸಿ ಕಡ್ಡಾಯ ಬಳಕೆಗೆ ಮುಂದಾಗುವಂತೆ ಕಾರ್ಯದರ್ಶಿಗೆ ಸೂಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.