ರಾಯಚೂರು: ಹೆಚ್ಚುತ್ತಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಈ ಹಿಂದೆ ಇದ್ದ ದಂಡ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಇದರಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ ವಸೂಲಿ ಮಾಡಿದ ಶುಲ್ಕಕ್ಕಿಂತ ಭಾರಿ ಏರಿಕೆ ಕಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಕಳೆದ ತಿಂಗಳಾಂತ್ಯದಲ್ಲಿ ಜಾರಿಗೆ ತಂದ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯಿಂದ ದಂಡ ಶುಲ್ಕ ಹೆಚ್ಚಳವಾಗಿದ್ದರಿಂದ ಇಲಾಖೆಯಿಂದ ಭಾರಿ ವಸೂಲಿ ಮಾಡಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಹೆಲ್ಮೆಟ್ ಹಾಕದೆ ವಾಹನ ಚಾಲನೆ, ವೇಗ ಚಾಲನೆ, ತ್ರಿಬಲ್ ರೈಡಿಂಗ್, ಮದ್ಯಪಾನ ಮಾಡಿ ವಾಹನ ಚಾಲನೆ, ಗೂಡ್ಸ್ ವಾಹನದಲ್ಲಿ ಪ್ರಯಾಣಿಕರ ಸಾಗಣೆ, ಶಾಲಾ ಮಕ್ಕಳ ಆಟೋ, ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳ ಸಾಗಣೆ ಸೇರಿದಂತೆ ಇತರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಒಟ್ಟು ಜುಲೈ ತಿಂಗಳಲ್ಲಿ 11,950 ಪ್ರಕರಣ ದಾಖಲಾಗಿವೆ. ಸುಮಾರು 20 ಲಕ್ಷದ 93 ಸಾವಿರ 400 ರೂ. ದಂಡ ವಸೂಲಿ ಮಾಡಿ ಸರ್ಕಾರದ ಖಜಾನೆ ತುಂಬಿಸಲಾಗಿದೆ.
ಅಲ್ಲದೇ ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮಾಡಿದ ಬಗ್ಗೆ ಜುಲೈ ತಿಂಗಳಲ್ಲಿ 73 ಪ್ರಕರಣ ದಾಖಲು ಮಾಡಲಾಗಿದೆ. ಅದೇ ರೀತಿ ಪ್ರಯಾಣಿಕರನ್ನು ಟಾಪ್ ಮೇಲೆ ಕೂರಿಸಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರ ಸಾಗಣೆಗೆ ಹೊಸ ತಿದ್ದುಪಡಿ ಕಾಯ್ದೆಯಡಿ ಭಾರಿ ದಂಡ ಶುಲ್ಕ ವಿಧಿಸಿ ರೂಲ್ಸ್ ಬ್ರೇಕ್ ಮಾಡಿದವರಿಗೆ ಡಿಎಲ್,ಆರ್ಸಿ ರದ್ದು ಮಾಡಿ ಶಾಕ್ ನೀಡಲಾಗಿದೆ.
ಖಜಾನೆ ಮೊತ್ತ ಏರಿಕೆಗೆ ಕಾರಣ:
ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಾದ ಕಾರಣ ದಂಡ ವಸೂಲಿ ಪ್ರಮಾಣ ಭಾರಿ ಏರಿಕೆ ಕಂಡಿದೆ. ಏಕೆಂದರೆ ಈ ಹಿಂದೆ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಟಿಂಟೆಡ್ ಗ್ಲಾಸ್, ತಪ್ಪಿರುವ ನಂಬರ್ ಪ್ಲೇಟ್, ಸೀಟ್ ಬೆಲ್ಟ್ ಕಟ್ಟದಿರುವುದು, ಫ್ಯಾನ್ಸಿ ಲೈಟ್ ಬಳಸಿದರೆ ರೂ.100 ದಂಡ ವಿಧಿಸಲಾಗುತ್ತಿದ್ದು, ಹೊಸ ತಿದ್ದುಪಡಿ ಅನ್ವಯ ರೂ.500 ಕ್ಕೆ ಹೆಚ್ಚಿಸಲಾಗಿದೆ. ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲನೆಗೆ ಇದ್ದ ದಂಡದ ಮೊತ್ತ 400 ರಿಂದ ರೂ.1000 ಕ್ಕೆ ಏರಿಸಲಾಗಿದೆ. ಅತೀ ವೇಗದ ಚಾಲನೆಗೆ ಇದ್ದ ದಂಡ 400 ರಿಂದ 1000 ಗೆ ಏರಿಸಲಾಗಿದೆ. ಹೀಗೆ ಪ್ರತಿಯೊಂದಕ್ಕೂ ಸಂಚಾರ ನಿಯಮ ಉಲ್ಲಂಘನೆಗೆ ಇದ್ದ ದಂಡ ಶುಲ್ಕವನ್ನು ಹೆಚ್ಚಳ ಮಾಡಿದ್ದರಿಂದ ವಸೂಲಾತಿ ಏರಿಕೆ ಆಗಿ ಸರ್ಕಾರದ ಖಜಾನೆ ತುಂಬುವಂತಾಗಿದೆ.
ಆದ್ರೆ ಸಂಚಾರ ನಿಯಮ ಉಲ್ಲಂಘನೆ ದರ ಏರಿಸಿ ವಾಹನ ಸವಾರರಿಂದ ಹೆಚ್ಚಿನ ಹಣ ಪೀಕುವುದು ಉದ್ದೇಶವಲ್ಲ. ದಂಡ ಶುಲ್ಕ ಹೆಚ್ಚಳದಿಂದ ವಾಹನ ಸವಾರರು ಜಾಗೃತರಾಗಿ ಸಂಚಾರ ನಿಯಮ ಉಲ್ಲಂಘನೆ ಕಡಿಮೆಯಾಗುತ್ತೆ ಹಾಗೂ ಅಪಘಾತಗಳ ಸಂಖ್ಯೆಯೂ ಇಳಿಮುಖವಾಗಲಿದೆ ಎನ್ನುತ್ತಾರೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ.