ರಾಯಚೂರು: ಆಸ್ಪತ್ರೆಯಿಂದ ಮನೆಗೆ ಬೈಕ್‌ನಲ್ಲಿ ತೆರಳುವ ವೇಳೆ ರಸ್ತೆ ಅಪಘಾತ ನಡೆದು ತಾಯಿ, ಮಗು ಮೃತಪಟ್ಟಿದ್ದಾರೆ. ಎಲ್‌ಬಿಎಸ್ ನಗರದ ಬಳಿ ಈ ದುರ್ಘಟನೆ ಸಂಭವಿಸಿದೆ.
ರಾಯಚೂರು ತಾಲೂಕಿನ ಶಾಖಾವಾದಿ ಗ್ರಾಮದ 30 ವರ್ಷದ ಈಶ್ವರಮ್ಮ, ಮೂರು ವರ್ಷದ ಮಗು ವನಿತಾ ಮೃತ ದುರ್ದೈವಿಗಳಾಗಿದ್ದಾರೆ.
ಈಶ್ವರಮ್ಮ ತನ್ನ ಮಗಳು ವನಿತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಅಣ್ಣನ ಮಗನೊಂದಿಗೆ ಬೈಕ್ ಮೇಲೆ ನಗರದ ಅಮೃತ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದಳು. ಈ ವೇಳೆ ಮಾರ್ಗಮಧ್ಯೆ ಲಾರಿ ಡಿಕ್ಕಿ ಹೊಡೆದಿದೆ.
ಬೈಕ್ ಚಾಲನೆ ಮಾಡುತ್ತಿದ್ದ ಸೂರ್ಯ ಪ್ರಕಾಶ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನಾ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ರಾಯಚೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.