ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಜಿಲ್ಲಾದ್ಯಂತ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ದಿನಾಂಕ ನಿಗದಿ ಮಾಡಲಾಗಿದೆ. ಏ.17 ರಂದು ಮತದಾನ ನಡೆಯಲಿದ್ದು, ಮಾ.16 ರಿಂದಲೇ ಜಿಲ್ಲೆಯಾದ್ಯಂತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಮಾ.23 ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಮಾ.30 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಮಾ.31ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.3 ರಂದು ನಾಮಪತ್ರ ಹಿಂಪಡೆಯುವ ಕೊನೆ ದಿನವಾಗಿದೆ. ಏ.17 ರಂದು ಮತದಾನ ನಡೆಯಲಿದ್ದು, ಮೇ.2 ರಂದು ಮತ ಏಣಿಕೆ ನಡೆಯಲಿದೆ ಎಂದರು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,354 ಮತದಾರಿದ್ದರೆ. ಇದರಲ್ಲಿ 1,01,301 ಪುರುಷರು,1,05,040 ಮಹಿಳೆಯರು ಮತ್ತು 18 ರಿಂದ 19 ವಯಸ್ಸಿನವರು 2,675, 70 ವರ್ಷ ಮೇಲ್ಪಟ್ಟವರು 3,334 ಮತ್ತು 2,400 ವಿಕಲಚೇತನರು ಮತ್ತು 14 ಜನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಕ್ಷೇತ್ರದಲ್ಲಿ 231 ಮತಗಟ್ಟೆಗಳಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ಮತದಾರರು ಇರುವಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪನೆ ಮಾಡುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 71 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಒಟ್ಟು 302 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಜತೆಗೆ ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ನಿಯಮ ಪಾಲಿಸಲು ಕಟ್ಟಿನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಪಟ್ಟಣದ ದೇವನಾಂಪ್ರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನೋಡಲ್ ಅಧಿಕಾರಿಯನ್ನಾಗಿ ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸೀಸ್ ಅನ್ನು ನೇಮಕ ಮಾಡಲಾಗಿದೆ. 6 ವಿಡಿಯೋ ಸರ್ವಲೆನ್ಸ್ ತಂಡ, 18 ಸೆಕ್ಟರ್ ಮ್ಯಾಜಿಸ್ಟ್ರೇಟರ್, 3 ಲೆಕ್ಕಪತ್ರ ಪರಿಶೀಲನಾ ತಂಡಗಳನ್ನು ರಚಿಸಲಾಗುತ್ತಿದ್ದು, ಚುನಾವಣೆ ಕಾರ್ಯಕ್ಕೆ 2,369 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.