ರಾಯಚೂರು : ಪ್ರಕೃತಿ ನಮ್ಮೆಲ್ಲರ ತಾಯಿ. ಅದರ ಸಂರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದರು.
ನಗರದ ಕರ್ನಾಟಕ ಹೌಸಿಂಗ್ ಬೋರ್ಡ್ ಸೊಸೈಟಿಯ ಸಾರ್ವಜನಿಕ ಉದ್ಯಾನವನದಲ್ಲಿ ಗ್ರೀನ್ ರಾಯಚೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪಂಚವಟಿ ಗಿಡಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪ್ರಕೃತಿ ಎಂಬುವುದು ನಮ್ಮೆಲ್ಲರ ತಾಯಿ. ಅದರಿಂದಲೇ ನಾವು ಎಂಬುವುದನ್ನ ಮರೆಯಬಾರದು. ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ನಗರದ ಜನತೆ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು ಎಂದು ಮನವಿ ಮಾಡಿದರು.
ಗ್ರೀನ್ ರಾಯಚೂರು ಮುಖಂಡ ರಾಜೇಂದ್ರ ಕುಮಾರ್ ಶಿವಾಳೆ ಮಾತನಾಡಿ, ಪ್ರಕೃತಿ ವಂದನಾ ಕಾರ್ಯಕ್ರಮವೇ ವಿಶಿಷ್ಟವಾಗಿದೆ. ಪ್ರಕೃತಿ ಸಂರಕ್ಷಣಾ ಕಾರ್ಯ ಒಂದು ದಿನಕ್ಕೆ ಸೀಮಿತವಾಗದೆ, ನಿತ್ಯವೂ ನಡೆಯಬೇಕು. ನಗರದಲ್ಲಿ ಗ್ರೀನ್ ರಾಯಚೂರು ವತಿಯಿಂದ 108 ಪಂಚವಟಿ ಗಿಡಗಳನ್ನು ಹಚ್ಚುವ ಗುರಿಯಲ್ಲಿ 56 ಕಡೆ ಪಂಚವಟಿ ಗಿಡಗಳನ್ನು ಹಚ್ಚಲಾಗಿದೆ. ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೈಜೊಡಿಸಬೇಕು ಎಂದರು.