ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಹಾಗೂ ನಿಖಿಲ್ ಇಬ್ಬರೂ ಸೋತಿರುವ ಕಾರಣ ಸಿಎಂ ಕುಮಾರಸ್ವಾಮಿ ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಅವರ ತಂದೆ ದೇವೇಗೌಡರು ಹಾಗೂ ಮಗ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಕುಮಾರಸ್ವಾಮಿಗೆ ಮಾನ, ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು ಎಂದರು.
ಓರ್ವ ಸಾಮಾನ್ಯ ಮಹಿಳೆ ಎದುರು ಸಿಎಂ ಮಗ ಸೋತಿದ್ದಾನೆ. ಸಿಎಂ ತಂದೆಯೂ ಸೋತಿದ್ದಾರೆ. ನಾಚಿಕೆಯೇ ಇಲ್ಲದ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಇರುವ ರಾಜ್ಯದಲ್ಲಿಯೇ ಆವರ ಪಕ್ಷ ಇಷ್ಟು ಹೀನಾಯವಾಗಿ ಸೋಲು ಕಂಡಿದ್ದು ದೇಶದ ಇತಿಹಾಸದಲ್ಲೇ ಮೊದಲು ಎಂದು ಛೇಡಿಸಿದರು.
ಎಮ್ಮೆ ಹಿಂದೆ ಆಕಳು, ಕರು ಹೋಗಿ ಹಿಂಡಿ ತಿಂದಂತಾಗಿದೆ ಕಾಂಗ್ರೆಸ್ನ ಪರಿಸ್ಥಿತಿ. ಸಿಎಂ ಅನೈತಿಕ ಸರ್ಕಾರ ನಡೆಸುತ್ತಿದ್ದಾರೆ. ಶೇ. 20ರಷ್ಟೂ ಸಾಲಮನ್ನಾ ಆಗಿಲ್ಲ ಎಂದು ಗುಡುಗಿದ ಅವರು, ಕುಮಾರಸ್ವಾಮಿ ನೀನು ರಾಜೀನಾಮೆ ಕೊಡಬೇಕು ಎಂದು ಏಕವಚನದಲ್ಲಿ ಹರಿಹಾಯ್ದರು.
ನಮ್ಮ ನಿರೀಕ್ಷೆಯಂತೆ ರಾಯಚೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇಷ್ಟು ವರ್ಷಗಳ ಯಾವುದೇ ಅಭಿವೃದ್ಧಿ ಮಾಡದ ಹಿಂದಿನ ಜನಪ್ರತಿನಿಧಿಗಳಿಂದ ಬೇಸತ್ತು ಜನ ಬಿಜೆಪಿಗೆ ಮತ ನೀಡಿದ್ದಾರೆ. ಏಮ್ಸ್ ಸೇರಿದಂತೆ ನಾವು ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.