ಲಿಂಗಸುಗೂರು (ರಾಯಚೂರು): ತಾಲೂಕಿನ ಕೃಷ್ಣಾ ನಡುಗಡ್ಡೆಗೆ ಕಡದರಗಡ್ಡಿ ಗೋನವಾಟ್ಲ ಮಧ್ಯೆ ಸೇತುವೆ ನಿರ್ಮಾಣಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ತಾಲೂಕಿನ ಶೀಲಹಳ್ಳಿ ಸೇತುವೆ, ಯಳಗುಂದಿ, ಯರಗೋಡಿ ಇತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ನಡುಗಡ್ಡೆ ಪ್ರದೇಶದ ಸಂತ್ರಸ್ತ ಕುಟುಂಬಗಳ ಶಾಶ್ವತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು.
ಪ್ರತಿವರ್ಷ ಪ್ರವಾಹ ಸಂದರ್ಭದಲ್ಲಿ ಸಂರಕ್ಷಣೆಗೆ ಎಂದು ಆಡಳಿತ ವ್ಯವಸ್ಥೆ ಶ್ರಮಿಸುತ್ತಿದೆ. ಯಾವುದಕ್ಕೂ ಸಂತ್ರಸ್ತ ಕುಟುಂಬ ಸದಸ್ಯರ ವಿಶ್ವಾಸಕ್ಕೆ ಪಡೆದು ಕ್ರಮ ಕೈಗೊಳ್ಳಲು ನೀರಾವರಿ ಸಚಿವರು, ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು ಎಂದರು.
ಬಹುದಿನಗಳ ಬೇಡಿಕೆಯಾದ ಕಡದರಗಡ್ಡಿ ಗೋನವಾಟ್ಲ ಮಧ್ಯೆ ಕೃಷ್ಣಾ ನದಿಗೆ ಸೇತುವೆ ನಿರ್ಮಿಸಲು 18 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ತುರ್ತು ಕ್ರಮಕ್ಕೆ ಒತ್ತಡ ಹೇರಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರವಾಹ ಪೀಡಿತ ಪ್ರದೇಶ ವೀಕ್ಷಣಾ ತಂಡದಲ್ಲಿ ರಾಜಾ ಶ್ರೀನಿವಾಸ ನಾಯಕ, ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ ಇದ್ದರು.