ರಾಯಚೂರು : ಜಿಲ್ಲೆಯ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದ ಬಳಿಯ ರಾಜೋಳ್ಳಿಬಂಡಾ ತಿರುವು ನಾಲಾ ಯೋಜನೆ ಬಲ ಭಾಗದಲ್ಲಿ ಆಂಧ್ರ ಸರ್ಕಾರ ಮತ್ತೊಂದು ಕಾಲುವೆ ನಿರ್ಮಾಣ ಮಾಡಲು ಮುಂದಾಗಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಶಾಸಕ ಬಸವನಗೌಡ ದದ್ದಲ್ ಆಗ್ರಹಿಸಿದ್ದಾರೆ.
ರಾಜೋಳ್ಳಿಬಂಡಾ ನಾಲೆಯ ಪಕ್ಕದಲ್ಲಿ ಆಂಧ್ರ ಪ್ರದೇಶ ಸರ್ಕಾರ ಮತ್ತೊಂದು ಕಾಲುವೆ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ ತೆಲಂಗಾಣ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ತಡೆಯಲು ತೆಲಂಗಾಣ ರೈತರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡುವಂತಾಯಿತು.
ಸ್ಥಳಕ್ಕೆ ಭೇಟಿ ನೀಡಿದ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಯೋಜನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕಾಲುವೆ ಕಾಮಗಾರಿ ನಡೆಸದಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಏನಿದು ರಾಜಲಬಂಡಾ ಯೋಜನೆ?
ರಾಜೋಳ್ಳಿಬಂಡಾ ನಾಲಾ ಯೋಜನೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮೂರು ರಾಜ್ಯಗಳಿಗೆ ಸಂಬಂಧಿಸಿದ್ದು. ಮುಖ್ಯ ಕಾಲುವೆ 42.6 ಕಿ.ಮೀ.ವರೆಗೆ ಕರ್ನಾಟಕದಲ್ಲಿ ಹಾದು ಹೋಗುತ್ತದೆ. ಈ ಯೋಜನೆಯಡಿ ಕೃಷಿ ಉಪಯೋಗಕ್ಕಾಗಿ 17.10 ಟಿಎಂಸಿ ನೀರು ಮೀಸಲಿಡಲಾಗಿದೆ. ಅದರಲ್ಲಿ ನಮ್ಮ ರಾಜ್ಯಕ್ಕೆ 1.20 ಟಿಎಂಸಿ, ತೆಲಂಗಾಣಕ್ಕೆ 15.90 ಟಿಎಂಸಿ ನೀರು ಹಂಚಿಕೆಯಾಗಿದೆ. ರಾಜ್ಯದ 5,879 ಎಕರೆ ಹಾಗೂ ತೆಲಂಗಾಣದ 87,500 ಎಕರೆ ಪ್ರದೇಶಕ್ಕೆ ಈ ಯೋಜನೆ ನೀರಾವರಿ ಒದಗಿಸುತ್ತದೆ.
ಇದೀಗ ಆಂಧ್ರ ಸರ್ಕಾರ ಮುಖ್ಯ ಕಾಲುವೆಯ ಮೇಲ್ಭಾಗದಲ್ಲಿ ಅಕ್ರಮವಾಗಿ ತೂಬುಗಳನ್ನು ನಿರ್ಮಿಸಿ, ಮತ್ತೊಂದು ಕಾಲುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಇದು ಅಕ್ರಮ ನೀರಾವರಿ ಉದ್ದೇಶಕ್ಕೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಿಂದ ರಾಜ್ಯದ ಪಾಲಿನ ಬೇಡಿಕೆ 800 ಕ್ಯೂಸೆಕ್ ನೀರಿಗೆ ಕೊರತೆ ಎದುರಾಗಲಿದೆ. ಹಾಗಾಗಿ, ಕೂಡಲೇ ಕಾಮಗಾರಿಯನ್ನು ಕೈ ಬಿಡುವಂತೆ ಒತ್ತಾಯಿಸಲು ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಸಕ ಬಸನಗೌಡ ದದ್ದಲ್ ಪತ್ರ ಬರೆದಿದ್ದಾರೆ.
ಓದಿ : ಪ್ರವಾಹಪೀಡಿತ ಪ್ರದೇಶಗಳಲ್ಲಿ ಟ್ರಾನ್ಸ್ಫಾರ್ಮರ್ಗಳ ಎತ್ತರವನ್ನು ಹೆಚ್ಚಿಸಿ: ಡಿಸಿಎಂಕಾರಜೋಳ ಸೂಚನೆ
ಆಂಧ್ರ ಸರ್ಕಾರದ ಈ ಯೋಜನೆಗೆ ಮುಖ್ಯವಾಗಿ ತೆಲಂಗಾಣದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಲಬಂಡಾ ನಾಲೆ ಕರ್ನಾಟಕದಲ್ಲಿ ಹಾದು ಹೋಗಿರುವುದರಿಂದ ತೆಲಂಗಾಣ, ಆಂಧ್ರ ರೈತರ ತಿಕ್ಕಾಟ ತಡೆಯುವುದು ರಾಜ್ಯದ ಪೊಲೀಸರಿಗೆ ತೆಲೆನೋವಾಗಿ ಪರಿಣಮಿಸಿದೆ.