ರಾಯಚೂರು : ಬೆಂಗಳೂರಲ್ಲಿ ಇಂದು ಬೆಳಿಗ್ಗೆ ಬಿಎಂಟಿಸಿ ಬಸ್ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಮೃತಪಟ್ಟ ಚಾಲಕ ಮುತ್ತಯ್ಯ (45) ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಮತ್ತು ಕುಟುಂಬಸ್ಥರಿಗೆ ನೌಕರಿ ಕೊಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದ್ದಾಗಿ ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದರು.
ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿಯನ್ನಾಗಿ ಮಾಡುತ್ತಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಲೇವಡಿ ಮಾಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಂತಹ ಧೀಮಂತ ನಾಯಕರು ಆಗಿದ್ದಂತಹ ದಿ. ದೇವರಾಜ್ ಅರಸು, ದಿ. ವೀರೇಂದ್ರ ಪಾಟೀಲ್, ದಿ. ನಿಜಲಿಂಗಪ್ಪ, ದಿ. ಬಂಗಾರಪ್ಪನಂತಹ ನಾಯಕರನ್ನು ಯಾವ ರೀತಿಯಾಗಿ ಕಾಂಗ್ರೆಸ್ ಪಕ್ಷ ನಡೆಸಿಕೊಂಡಿದೆ ಎನ್ನುವುದನ್ನು ನೋಡಿದ್ದೇವೆ. ಅದೇ ರೀತಿಯಲ್ಲಿ ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಾಡಲು ಹೊರಟಿದ್ದು, ಅವರನ್ನು ಹರಕೆ ಕುರಿಯನ್ನಾಗಿ ಮಾಡಲಿದೆ ಎಂದರು.
ಕಾಂಗ್ರೆಸ್‌ಗೆ ಧಮ್ ಹಾಗೂ ತಾಕತ್ ಇದ್ದರೆ, ಮಾಜಿ ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ನೋಡಲಿ ಎಂದು ಸವಾಲು ಹಾಕಿದ ಅವರು, ಕಾಂಗ್ರೆಸ್ನಲ್ಲಿ ಒಂದು ವಾಡಿಕೆಯಿದೆ. ಅದರಂತೆ ಸಿದ್ದರಾಮಯ್ಯ ಅವರನ್ನ ಹರಕೆಯ ಕುರಿಯನ್ನಾಗಿ ಮಾಡಲಾಗುತ್ತೆ ಎಂದು ದೂರಿದರು. ಕಾಂಗ್ರೆಸ್ ಪಕ್ಷದೊಳಗೆ ಈಗಾಗಲೇ ಒಳಜಗಳ ಶುರುವಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಗದ್ದಲ, ಗೊಂದಲ ಶುರುವಾಗಿದೆ. ಪಕ್ಷದಲ್ಲಿ ಒಗ್ಗಟ್ಟು ಇಲ್ಲದೇ ಮನೆಯೊಂದು ಮೂರು ಬಾಗಿಲು ಆಗಿದೆ, ಮುಂದಿನ ದಿನಗಳಲ್ಲಿ ಮುರಿದ ಬಾಗಿಲು ಆಗುತ್ತದೆ ಎಂದು ವ್ಯಂಗ್ಯವಾಡಿದರು. ಬಿಎಂಟಿಸಿ ನೌಕರರ ಅಗ್ನಿ ಅವಘಡದಲ್ಲಿ ಮೃತಪಟ್ಟ ನೌಕರನಿಗೆ ಐದು ಲಕ್ಷ ರೂಪಾಯಿ ಪರಿಹಾರ ಧನ ಹಾಗೂ ಅವರ ಕುಟುಂಬಕ್ಕೆ ನೌಕರಿ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಪಾರ್ಟಿ ಆರ್ಶೀವದಿಸಿದರೆ ಸಿಎಂ ಆಗೋಣ - ಶ್ರೀರಾಮುಲು: ಬಿಜೆಪಿಯಲ್ಲಿ ಈ ಹಿಂದೆ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ನಗು ನಗುತ್ತಲೆ ಉತ್ತರಿಸಿದ ಅವರು, ಈಗ ಉಪಮುಖ್ಯಮಂತ್ರಿ ಸ್ಥಾನ ಹೋಯ್ತು, ಪ್ರಮೋಷನ್ ಆಗಿ ಮುಖ್ಯಮಂತ್ರಿ ಸ್ಥಾನ ಬಂದಿದೆ. ಪಾರ್ಟಿ ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿ ಆಗೋಣ ಎಂದರು.
ಇದನ್ನೂ ಓದಿ: ಬಿಎಂಟಿಸಿ ಬಸ್ನಲ್ಲಿ ಬೆಂಕಿ: ನಿದ್ರಿಸುತ್ತಿದ್ದ ನಿರ್ವಾಹಕ ಸಜೀವ ದಹನ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯಕ್ರಮಗಳು ಜನರಿಗೆ ತಲುಪಿದ್ದು, ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನತೆ ಭಾಗವಹಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಎಲ್ಲೆಡೆ ಜನಸಾಗರವೇ ಸೇರುತ್ತಿದೆ. ಇದು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರ ಸಂದೇಶ ತೋರಿಸಿದೆ ಎಂದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾತನಾಡಿ, ಕಾಂಗ್ರೆಸ್ ಸತತ ಸೋಲಿನಿಂದ ಹತಾಶವಾಗಿದ್ದು, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಅನುಮಾನ, ಅಪಮಾನ, ಅಪಪ್ರಚಾರಗಳ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ಹಣಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಐಐಟಿ ವಿಚಾರದಲ್ಲಿ ರಾಯಚೂರಿಗೆ ಅನ್ಯಾಯವಾಗಿತ್ತು: ಕಾಂಗ್ರೆಸ್ ಈ ಸಲದ ಚುನಾವಣೆಯಲ್ಲಿಯೂ ಸೋಲು ಕಾಣುವುದು ನಿಶ್ಚಿತ. ಸ್ಪಷ್ಟ ಬಹುಮತ ಬಿಜೆಪಿ ಪರವಾಗಿ ಬರಲಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ಸಂಸ್ಥೆ ಮಂಜೂರು ಮಾಡಿಲ್ಲ. ಮಾಡಿದರೆ ರಾಯಚೂರಿಗೆ ಆದ್ಯತೆ ನೀಡಲಾಗುವುದು. ಏಮ್ಸ್ ಮಾದರಿ ಸಂಸ್ಥೆ ರಾಯಚೂರಿಗೆ ಮಂಜೂರು ಮಾಡಿದ್ದು, ಏಮ್ಸ್ ರೀತಿಯಲ್ಲಿಯೇ ಎಲ್ಲ ಸೌಲಭ್ಯಗಳು ಅದರಲ್ಲಿ ಲಭ್ಯವಾಗಲಿವೆ. ಐಐಟಿ ವಿಚಾರದಲ್ಲಿ ರಾಯಚೂರಿಗೆ ಕಾಂಗ್ರೆಸ್ನಿಂದ ಅನ್ಯಾಯ ಆಗಿತ್ತು. ಅದನ್ನು ಸರಿಪಡಿಸಲು ಕೇಂದ್ರದ ಬಿಜೆಪಿ ಸರ್ಕಾರವು ರಾಯಚೂರಿಗೆ ಐಐಐಟಿ ನೀಡಿತು ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ : ರೈತರ ಮಕ್ಕಳನ್ನು ಮದುವೆಯಾದ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ.. ಕುಮಾರಸ್ವಾಮಿ ಅಭಯ