ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕುರಿತಂತೆ ಬಿಜೆಪಿಯ ಹಿರಿಯ ನಾಯಕರಿಗೆ ನಾನು ಯಾವ ವಿಚಾರ ಮುಟ್ಟಿಸಬೇಕೋ ಅದನ್ನು ಮುಟ್ಟಿಸುವ ಕೆಲಸ ಮಾಡಿದ್ದೇನೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದರು. ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರೆಡ್ಡಿಯವರು ನಮ್ಮ ಪಾರ್ಟಿಯವರೇ. ಅವರ ವಿಚಾರವನ್ನು ಎಲ್ಲ ಹಿರಿಯರ ಗಮನಕ್ಕೆ ತಂದಿದ್ದೇನೆ ಎಂದರು.
ಪ್ರಾದೇಶಿಕ ಪಕ್ಷ ಸ್ಥಾಪನೆ ವಿಚಾರ ನನ್ನ ಗಮನಕ್ಕೂ ಬಂದಿತ್ತು. ನನ್ನ ಬಳಿ ಕೆಲವೊಂದಿಷ್ಟು ವಿಚಾರಗಳನ್ನು ಅವರು ಚರ್ಚಿಸಿದ್ದರು. ಇತ್ತೀಚಿಗೆ ಬೇರೆ ಬೇರೆ ಬೆಳವಣಿಗೆಯಾಗಿದೆ. ನಾನು ಸ್ವಲ್ಪ ಬ್ಯುಸಿ ಇದ್ದೆ. ಅವರನ್ನು ಭೇಟಿ ಆಗಿಲ್ಲ. ಮುಂದೊಂದಿನ ಖಂಡಿತವಾಗಿ ನಾನು ಭೇಟಿಯಾಗುತ್ತೇನೆ. ಆ ಸಂದರ್ಭದಲ್ಲಿ ಅವರಿಗಾದ ನೋವಿನ ಕುರಿತು ಮಾತಾಡ್ತೀನಿ ಎಂದು ತಿಳಿಸಿದರು.
ಸ್ನೇಹದ ವಿಚಾರ ಬಂದಾಗ ಎಲ್ಲ ಪಾರ್ಟಿಯವರು ಒಂದೇ. ಪಾರ್ಟಿ ಅಂದಾಗ ಭಿನ್ನಾಭಿಪ್ರಾಯಗಳು ಸಹಜ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಮಾನರು. ರೆಡ್ಡಿಯವರು ನನಗೆ ಆತ್ಮೀಯ ಸ್ನೇಹಿತರು. ಸ್ನೇಹಕ್ಕೆ ರಾಮುಲು ಒಳ್ಳೆಯ ಮನುಷ್ಯ ಎಂದು ಅನ್ನಿಸಿಕೊಂಡಿದ್ದೇನೆ. ಸ್ನೇಹ, ಪಾರ್ಟಿ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವೆ. ಈ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೋ ಅಷ್ಟು ಮಾಡುತ್ತೇನೆ. ಪಾರ್ಟಿ ರಾಜಕೀಯವಾಗಿ ನನಗೆ ತಾಯಿ. ತಾಯಿಗೆ ಯಾವ ರೀತಿ ಗೌರವ ಕೊಡಬೇಕೋ ಅದನ್ನು ಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.
ಇದನ್ನೂ ಓದಿ: ಕೊಪ್ಪಳ: ಜನಾರ್ದನ ರೆಡ್ಡಿ ವಾಸ್ತವ್ಯಕ್ಕೆ ಸಿದ್ಧವಾಯ್ತು ಭವ್ಯ ಬಂಗಲೆ!