ರಾಯಚೂರು: ಎರಡು ತಿಂಗಳ ಹಿಂದಷ್ಟೇ ಸುರಿದ ಮಹಾ ಮಳೆಯಿಂದಾಗಿ ತತ್ತರಿಸಿದ್ದ ರಾಯಚೂರು ಈಗ ಮತ್ತೊಮ್ಮೆ ಪ್ರವಾಹಕ್ಕೆ ಸಿಲುಕುವಂತಾಗಿದೆ.
ಆಗಸ್ಟ್ನಲ್ಲಿ ಸುರಿದ ಮಳೆಯಿಂದಾಗಿ ನಾರಾಯಣಪುರ ಡ್ಯಾಂನಿಂದ ಲಕ್ಷಾಂತರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಟ್ಟ ಕಾರಣ ರಾಯಚೂರು ತಾಲೂಕಿನ ಆತ್ಕೂರು, ಸರ್ಜಾಪುರ, ಡಿ.ರಾಂಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಅಪಾರ ಪ್ರಮಾಣದ ನೀರು ಬೆಳೆಗೆ ದಾಂಗುಡಿ ಇಟ್ಟು ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿತ್ತು.
ಮತ್ತೆ ನಿನ್ನೆ ಸುರಿದ ಮಳೆಯಿಂದಾಗಿ ನಾರಾಯಣಪುರ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಕೃಷ್ಣಾ ನದಿಗೆ ಬಿಡಲಾಗಿದ್ದು, ರಾಯಚೂರು ತಾಲೂಕಿನ ಆತ್ಕೂರು ಸುತ್ತಮುತ್ತಲಿನ 30ಕ್ಕೂ ಹೆಚ್ಚು ರೈತರ ಪಂಪ್ಸೆಟ್ ನೀರುಪಾಲಾಗಿವೆ. ನಾರಾಯಣಪುರ ಜಲಾಶಯದಿಂದ ನೀರು ಬಿಡುವ ವಿಷಯ ಜಿಲ್ಲಾಡಳಿತದಿಂದ ಪ್ರಚಾರ ಮಾಡಿಸಿದರೂ ಆತ್ಕೂರು ಗ್ರಾಮದ ರೈತರು ಎಚ್ಚೆತ್ತುಕೊಳ್ಳದ ಪರಿಣಾಮ ಈಗ ಪಂಪ್ಸೆಟ್ ನೀರುಪಾಲಾಗಿವೆ.
ಈಗ ನಾರಾಯಣಪುರ ಜಲಾಶಯದಿಂದ ಕೇವಲ 3 ಲಕ್ಷ ಕ್ಯೂಸೆಕ್ ನೀರು ಬಿಡುತ್ತಿರುವ ಕಾರಣ ಹೆಚ್ಚೇನೂ ಆತಂಕವಿಲ್ಲ. ಆದ್ರೆ ಇದಕ್ಕೂ ಹೆಚ್ಚಿನ ಪ್ರಮಾಣ ನೀರು ಬಿಟ್ಟಿದ್ದೇ ಆದಲ್ಲಿ ಸಂಪೂರ್ಣವಾಗಿ ಬೆಳೆ ನಾಶವಾಗುವುದು ಖಂಡಿತಾ ಎಂದು ಆತ್ಕೂರು ಗ್ರಾಮದ ಹೊಳೆ ದಂಡೆಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂದು ಪ್ರವಾಹದಿಂದ ಹತ್ತಿ, ತೊಗರಿ, ಭತ್ತ ಹಾಗೂ ಇತರೆ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದ್ದು, ಸಂತ್ರಸ್ತರಿಗೆ ಬೆಳೆ ಪರಿಹಾರವೂ ಸಿಕ್ಕಿಲ್ಲ. ಆದ್ರೆ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.