ರಾಯಚೂರು : ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮಸ್ಕಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ. ಈ ಕ್ಷೇತ್ರಕ್ಕೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟೀಲ್ ಶಾಸಕರಾಗಿ ಅಲ್ಪ ಮತಗಳಿಂದ ಆಯ್ಕೆಯಾಗಿದ್ದರು.
ಆದರೆ, ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ, ಕ್ಷೇತ್ರ ಶಾಸಕರಿಲ್ಲದೆ ಅನಾಥವಾಗಿದೆ. ಇದೀಗ ಚುನಾವಣಾ ಆಯೋಗ 2021, ಏಪ್ರಿಲ್ 17ಕ್ಕೆ ಮತದಾನದ ದಿನಾಂಕ ನಿಗದಿ ಮಾಡಿದೆ.
ಮಸ್ಕಿಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಪ್ರತಾಪ್ ಗೌಡ ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅವರು, ಎರಡು ಬಾರಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು.
ಕಾಂಗ್ರೆಸ್ನಿಂದ ಎರಡನೇ ಬಾರಿಗೆ ಸ್ಪರ್ಧೆ ಮಾಡಿದಾಗ ಅಲ್ಪ ಮತಗಳಿಂದ ಗೆಲುವು ಸಾಧಿಸಿ, ಬಳಿಕ ಅವಧಿಗೂ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಏಪ್ರಿಲ್ 17ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಗೌಡ ಪಾಟೀಲ್ ಸ್ಪರ್ಧಿಸಲಿದ್ದಾರೆ. ಅಧಿಕೃತವಾಗಿ ಪಕ್ಷದಿಂದ ಟಿಕೆಟ್ ಘೋಷಣೆಯಾಗಬೇಕಿದೆ.
ಓದಿ : ಮತ್ತೊಂದು ಉಪಸಮರಕ್ಕೆ ಮುಹೂರ್ತ ಫಿಕ್ಸ್: ಮೂರು ಉಪಸಮರ ರಣಕಣಗಳ ಚಿತ್ರಣ ಹೀಗಿದೆ
ಪಕ್ಷಕ್ಕೆ ದ್ರೋಹವೆಸಗಿದ ಶಾಸಕನಿಗೆ ತಕ್ಕ ಪಾಠ ಕಲಿಸಬೇಕೆಂಬ ಉದ್ದೇಶದಿಂದ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಆರ್ ಬಸವನಗೌಡ ತುರುವಿಹಾಳ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡಿದೆ. ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ನಿಂದ ಬಸವಗೌಡ ಸ್ಪರ್ಧಿಸುವ ಸಾಧ್ಯತೆಯಿದೆ.
ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಪರಿಣಾಮ ಕಳೆದ 21 ತಿಂಗಳಿನಿಂದ ಶಾಸಕರಿಲ್ಲದೆ ಕ್ಷೇತ್ರ ಅನಾಥವಾಗಿತ್ತು. ಇದೀಗ ಶಾಸಕರ ಆಯ್ಕೆಗೆ ಕಾಲ ಕೂಡಿ ಬಂದಿದೆ. ಮಸ್ಕಿ ಕ್ಷೇತ್ರದ ಜನ ಈ ಬಾರಿ ಯಾರಿಗೆ ಮಣೆ ಹಾಕ್ತಾರೆ ಎನ್ನುವುದನ್ನು ಕಾದು ನೋಡಬೇಕು.