ರಾಯಚೂರು: ಬಿಜೆಪಿಯ ಹಣ ಹಂಚಿಕೆಯಿಂದ ನಾವು ಸೋಲಬೇಕಾಯಿತೆ ಹೊರೆತು ಸಿಎಂ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಅವರ ಯಾವುದೇ ತಂತ್ರಗಾರಿಕೆಯಿಂದ ಅಲ್ಲ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಿರಾದಲ್ಲಿ ತಮ್ಮ ಪಕ್ಷ ಹಿನ್ನೆಡೆ ಸಾಧಿಸಿದ್ದಕ್ಕೆ ಕಾರಣ ನೀಡಿದರು.
ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮತನಾಡಿದ ಅವರು, ವಿಜಯೇಂದ್ರ ತಂತ್ರಗಾರಿಕೆಯಿಂದ ಶಿರಾ ಗೆಲುವು ಎಂಬುದು ಸುಳ್ಳು. ಚುನಾವಣೆಯಲ್ಲಿ ಹಣ ಹಂಚಿಯಾಗಿದ್ದರಿಂದ ನಾವು ಸೋತೆವು.
ಹಣ ಹಂಚುವುದೇ ವಿಜಯೇಂದ್ರ ತಂತ್ರಗಾರಿಕೆಯಾಗಿದೆ. ಮಸ್ಕಿಯಲ್ಲಿಯೂ ಹಣ ಹಂಚಲು ಬರುತ್ತಾರೆ. ಅವರ ಯಾವುದೇ ಆಮಿಷಕ್ಕೆ ಒಳಗಾಗಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರಕ್ಕೆ ಬಂದಲ್ಲಿ ಎಲ್ಲ ಸಮಾಜದ ಬಡವರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಸಮಾವೇಶದಲ್ಲಿಯೇ ಮಾಜಿ ಸಿಎಂ ಭರವಸೆ ನೀಡಿದರು.
ಮೋದಿ ಮಹಾನ್ ಸುಳ್ಳುಗಾರ:
ಸಿಎಂ ರಾಜ್ಯದ ಮೇಲೆ ಸಾವಿರಾರು ಕೋಟಿ ರೂ. ಸಾಲದ ಹೊರೆ ಹೊರಿಸಿದ್ದಾರೆ. ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ. ಕಪ್ಪುಹಣ ತರುವ ಭರವಸೆ ನೀಡಿದ್ದ ಪ್ರಧಾನಿ 15 ಪೈಸೆಯನ್ನೂ ಸಹ ದೇಶದ ಜನರ ಖಾತೆಗೆ ಹಾಕಿಲ್ಲ. ಎಂಥ ಸುಳ್ಳುಗಾರ ಎಂಬುವುದು ಎಂಬುದಷ್ಟೇ ಇಷ್ಟು ಸಾಕು. ದೇಶ ಹಾಗೂ ರಾಜ್ಯವನ್ನು ಉಳಿಸುವುದು ಎಲ್ಲ ಮತದಾರರ ಕೈಯಲ್ಲಿದೆ. ಮಸ್ಕಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸೋದ್ರಿಂದ ರಾಜ್ಯದಲ್ಲಿ ಬದಲಾವಣೆಯಾಗಲ್ಲ ನಿಜ. ಆದ್ರೆ ಸರ್ಕಾರದ ದುರಾಡಳಿತದ ವಿರುದ್ಧ ಜನ ಮತ ನೀಡಿ ಪಾಠ ಕಲಿಸಬೇಕಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ್ ಮಾತನಾಡಿ, ಆರ್ ಆರ್ ನಗರ ಹಾಗೂ ಶಿರಾದಲ್ಲಿನ ಸೋಲಿನಿಂದ ಕಾಂಗ್ರೆಸ್ ಧೃತಿಗೆಟ್ಟಿಲ್ಲ. ಮಸ್ಕಿಯಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಸಿದ್ಧವಾಗಿದೆ. ರಾಜ್ಯದಲ್ಲಿ ಇದುವರೆಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಮಸ್ಕಿಯಲ್ಲಿಯೂ ಜಾತಿವಾರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಬೆದರಿಕೆಯೊಡ್ಡುವ ಕಾರ್ಯ ಸಹ ನಡೆದಿದೆ.
ಆ ಮೂಲಕ ಮಸ್ಕಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸಿಎಂ ಹೊರಟಿದ್ದಾರೆ. ನಮಗೂ ಚುನಾವಣೆ ಹೇಗೆ ಎದುರಿಸಬೇಕೆಂದು ಗೊತ್ತಿದೆ. ಮಸ್ಕಿ ಕ್ಷೇತ್ರದ ಫಲಿತಾಂಶ ರಾಜ್ಯದ ರಾಜಕೀಯದ ದಿಕ್ಕು ಬದಲಿಸಬೇಕೆಂಬುದು ಕಾಂಗ್ರೆಸ್ ಆಶಯ. ಅಂತೆಯೇ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕೆಂದು ಸಮಾವೇಶದಲ್ಲಿ ಅವರು ಕರೆ ನೀಡಿದರು.
ಸಮಾವೇಶಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಜಾಥಾ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಆರ್.ಬಸವನಗೌಡ ತುರುವಿಹಾಳ ಕಾಂಗ್ರೆಸ್ ಧ್ವಜವನ್ನ ಹಿಡಿದುಕೊಳ್ಳುವ ಸೇರ್ಪಡೆಗೊಂಡರು.