ರಾಯಚೂರು : ಕೊರೊನಾದಿಂದ ಮುಚ್ಚಲಾಗಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಬಾಗಿಲನ್ನು ಭಕ್ತರ ದರ್ಶನಕ್ಕಾಗಿ ಇಂದು ತೆರೆಯಲಾಯಿತು. ಇದಕ್ಕೂ ಮುನ್ನ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಮಠದ ಆವರಣದಲ್ಲಿನ ಶ್ರೀ ಮಂಚಾಲಮ್ಮ ದೇವಿಯಗೆ ಪೂಜೆ ಸಲ್ಲಿಸಿದರು. ಬಳಿಕ ಮುಖ್ಯದ್ವಾರಕ್ಕೂ ಪೂಜೆ ನೆರವೇರಿಸಿದ ಬಳಿಕ ತೆರೆಯಲಾಯಿತು.
ಬಳಿಕ ಮಠದೊಳಗೆ ಪ್ರವೇಶಿಸಿ ರಾಯರ ಮೂಲ ಬೃಂದಾವನ ದರ್ಶನ ಪಡೆದುಕೊಂಡರು. ಇದಾದ ಬಳಿಕ ಸಾರ್ವಜನಿಕರಿಗೆ ರಾಯರ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟರು. ದೇವಾಲಯದ ಬಾಗಿಲು ತೆರೆಯುವ ಹಿನ್ನೆಲೆ ಶ್ರೀಮಠವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.
ಕೊರೊನಾ ಸೋಂಕು ಹಿನ್ನೆಲೆ ಮಾ. 21ರಿಂದ ಮಠದ ಮುಖ್ಯದ್ವಾರದ ಬಾಗಿಲನ್ನು ಮುಚ್ಚುವ ಮೂಲಕ ದರ್ಶನ ಸ್ಥಗಿತಗೊಳಿಸಲಾಗಿತ್ತು. ಇದೀಗ ಅನ್ಲಾಕ್ ಸೂಚನೆಯಂತೆ ಆರು ತಿಂಗಳ ನಂತರ ಮಠದ ಬಾಗಿಲನ್ನು ತೆರೆಯುವ ಮೂಲಕ ರಾಯರ ದರ್ಶನ ಕಲ್ಪಿಸಲಾಗಿದೆ. ಕಳೆದ ಒಂದೂವರೆ ತಿಂಗಳನಿಂದ ಮಠದ ಮುಖ್ಯದ್ವಾರದ ಬಳಿಯೇ ನಿಂತು ಭಕ್ತರು ದರ್ಶನ ಮಾಡಿಕೊಂಡು ಹೋಗುತ್ತಿದ್ದರು.
ಇಂದಿನಿಂದ ರಾಯರ ಮೂಲ ಬೃಂದಾವನ ದ್ವಾರ ತೆರೆಯಲಾಗಿದ್ದು, ಕೋವಿಡ್-19 ಮಾರ್ಗಸೂಚಿಗಳ ಅನ್ವಯ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಶ್ರೀಮಠದಲ್ಲಿ ಇಂದು ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಸದ್ಯಕ್ಕೆ ಶ್ರೀಮಠಕ್ಕೆ ಸಾಮಾನ್ಯ ದರ್ಶನಕ್ಕೆ ವ್ಯವಸ್ಥೆ ಇದ್ದು, ವಿಐಪಿ ದರ್ಶನ ಇಲ್ಲ.