ರಾಯಚೂರು: ಮಂತ್ರಾಲಯದ ಶ್ರೀ ಶ್ರೀರಾಘವೇಂದ್ರ ಸ್ವಾಮಿ ಮಠದ ವಿದ್ಯಾಪೀಠದ ಬಾಲಕನೊಬ್ಬ ಊಟಕ್ಕೆ ಕುಳಿತಿದ್ದ ವೇಳೆ 'ನಂಗೆ ತಿನ್ನೋಕೆ ಪಾನಿಪೂರಿ ಬೇಕು' ಎಂದು ನೇರವಾಗಿ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರಿಗೆ ಬೇಡಿಕೆಯಿಟ್ಟಿದ್ದಾನೆ.
ಮಠದ ಶ್ರೀಗುರುಸೌರ್ವಭೌಮ ಸಂಸ್ಕೃತಿ ವಿದ್ಯಾಪೀಠದ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲಿ ತೆರಳಿದ ಪೀಠಾಧಿಪತಿಗಳು ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಈ ವೇಳೆ ಹೈದರಾಬಾದ್ ಮೂಲದ ಬಾಲಕನೊಬ್ಬ ನನಗೆ ತಿನ್ನಲು ಪಾನಿಪೂರಿ ಬೇಕೆಂದು ಶ್ರೀಗಳಿಗೆ ನೇರವಾಗಿ ಬೇಡಿಕೆಯಿಟ್ಟಿದ್ದಾನೆ. ಆಗ ಪೀಠಾಧಿಪತಿಗಳು, ಬಾಲಕನ ಆಸೆಗೆ ಸ್ಪಂದಿಸುವ ಮೂಲಕ ಅಡುಗೆ ತಯಾರಿಕರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
ಬಾಲಕನ ಕೋರಿಕೆಯಂತೆ ಪಾನಿಪೂರಿ ಮಾಡಿಸಿ, ಬಾಲಕನ ಜೊತೆಗೆ ವಿದ್ಯಾಪೀಠದಲ್ಲಿ ಅಭ್ಯಾಸ ಮಾಡುವ ಸುಮಾರು 200 ವಿದ್ಯಾರ್ಥಿಗಳಿಗೆ ಪಾನಿಪೂರಿ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬಾಲಕ ಸೇರಿದಂತೆ ಅಲ್ಲಿನ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.