ರಾಯಚೂರು: ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಮಧ್ಯಾಹ್ನದ ಬಿಸಿ ಊಟವನ್ನ ನೀಡಲು ಶಾಸಕ ಕೆ. ಶಿವನಗೌಡ ನಾಯಕ ಮುಂದಾಗಿದ್ದಾರೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕೆ. ಶಿವನಗೌಡ ನಾಯಕ ತಮ್ಮ ಕ್ಷೇತ್ರದ ಜನತೆಗೆ ಮಧ್ಯಾಹ್ನದ ಊಟ ನೀಡಲು ಇಂದಿನಿಂದ ಆರಂಭಿಸಿದ್ದಾರೆ. ದೇವದುರ್ಗ ತಾಲೂಕಿನಲ್ಲಿ ಒಟ್ಟು 33 ಗ್ರಾಮ ಪಂಚಾಯಿತಿ ವ್ಯಾಪ್ತಿಗಳು ಬರುತ್ತವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ಜನರಿಗೆ ಕೊರೊನಾ ಹಿನ್ನೆಲೆ ಪೌಷ್ಟಿಕಾಂಶದ ಊಟವನ್ನ ಒದಗಿಸಬೇಕು ಎನ್ನುವ ಉದ್ದೇಶದಿಂದ ಇಂದಿನಿಂದ ಕೆಎಸ್‌ಎನ್ ದಾಸೋಹ ಸ್ಥಾಪಿಸಿ, ವಿವಿಧ ಮಠಾಧೀಶರಿಂದ ಚಾಲನೆ ನೀಡಲಾಯಿತು.
ಇದಕ್ಕಾಗಿ ಬೃಹತ್ ಆದ ಪೆಂಡಲ್ ರೆಡಿ ಮಾಡಿಕೊಂಡು ನೂರು ಜನ ಬಾಣಸಿಗರಿಂದ ಊಟವನ್ನ ತಯಾರಿಸಿ, ಪೊಟ್ಟಣಗಳಲ್ಲಿ ಪ್ಯಾಕೆಟ್ ಮಾಡಿ, ಗ್ರಾಮಗಳಲ್ಲಿರುವ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 33 ಆಟೋಗಳ ಮೂಲಕ ಗ್ರಾಮಗಳಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ.
ಊಟದ ಜೊತೆಗೆ ಮೊಟ್ಟೆ ಹಾಗೂ ಮಾಸ್ಕ್ ಸಹ ವಿತರಣೆ ಮಾಡಲಾಗುತ್ತಿದ್ದು, ಲಾಕ್‌ಡೌನ್ ಜಾರಿ ಹಿನ್ನೆಲೆ ಮೂವತ್ತು ದಿನಗಳ ಕಾಲ ನಿತ್ಯ ದಾಸೋಹದ ಮೂಲಕ ತಮ್ಮ ಕ್ಷೇತ್ರದ ಗ್ರಾಮಗಳ ಮನೆ ಮನೆಗೆ ಊಟ ನೀಡಲಾಗುತ್ತಿದೆ. ಊಟವನ್ನ ಪ್ರತಿ 10 ದಿನಗಳಿಗೊಮ್ಮೆ ವಿವಿಧ ಬಗೆಯ ಪೌಷ್ಟಿಕಾಂಶದ ಊಟ ಸಿದ್ದಪಡಿಸಿ ಕ್ಷೇತ್ರದ ಜನತೆಗೆ ನೀಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ನಂತರ ಮುಂದುವರಿದು, ಈಗಾಗಲೇ ತಾಲೂಕಿನಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನಿತ್ಯ ಎರಡು ಸಾವಿರು ಊಟ ನೀಡುವ ಕೆಲಸ ನಡೆಯುತ್ತಿದ್ದು, ಕೊರೊನಾ ಹಿನ್ನೆಲೆ ಕ್ಷೇತ್ರದ ಜನತೆಗೆ ನಿತ್ಯದ ಊಟಕ್ಕೆ ತೊಂದರೆಯಾಗಬಾರದು ಎಂಬ ನಮ್ಮ ತಾಯಿಯವರ ಆಶಯದಂತೆಯೇ ಊಟ ತಲುಪಿಸಲಾಗುವುದು ಎಂದಿದ್ದಾರೆ.
ಓದಿ: ವಿಶೇಷ ಚೇತನರ ನೆರವಿಗೆ ಧಾವಿಸಿದ ಸಬ್ ಇನ್ಸ್‌ಪೆಕ್ಟರ್: 6 ತಿಂಗಳಿಗೆ ಸಾಕಾಗುವಷ್ಟು ಫುಡ್ ಕಿಟ್ ವಿತರಣೆ!